Total Pageviews

Friday 21 October 2011

ಒಂಟಿ ಗಡಿಯಾರದ ಗೋಳು


ಚೂರು ಕಲ್ಪನೆ ಚೂರು ಚಿಂತನೆಯಲಿ ಮುಳುಗಿರಲು ನಾನು
ಒಂದು ಒಂಟಿ  ಕೊಠಡಿಯೊಳಗೆ,
ಕೊಠಡಿಯ ಒಂಟಿತನಕ್ಕೆ ನನ್ನ ಸಾಥ್,
ನನ್ನ ಒಂಟಿತನಕ್ಕೆ ಆ ನಾಲ್ಕು ಗೋಡೆಗಳ ಮೇಲೆ
ಹಳೇ ನೆನಪುಗಳ ಸಾಥ್,
ಆ ಚಿಂತೆ – ಕಲ್ಪನೆಗಳಲಿ ಮೈ ಮರೆತಾಗ ಯಾರೋ ಕೂಗಿದ ಭಾಸ,
ಆಲಿಸಿದಾಗ ಸರಿಯಾಗಿ ಟಿಕ್ – ಟಿಕ್ ಗಡಿಯಾರದ ನಿನಾದ.....

ಕೇಳಿದೆ ನಾ ಸಮಯಮುಖಿಯನ್ನು
ನಿಂದೇನು ಗೋಳು ನಮ್ಮ ಗೋಳಿನ ಮದ್ಯೆ,
ಗುಡುಗಿತದು, ನನಗೇಕೆ ಮಾಡದ ತಪ್ಪಿಗೆ
ಜೀವನಪೂರ್ತಿ ಒಂಟಿಯಾಗಿ ಜೋತು ಬೀಳುವ ಶಿಕ್ಷೆ,
ಹಗಲು – ರಾತ್ರಿ ನಮ್ಮ ಚಲನೆಯೇ ನಿಮಗೆ ಪ್ರೇರಣೆ
ನಿಮ್ಮ ಹಗಲು ಹಾರಾಟಕ್ಕೆ,
ಮರಳಿ ಗೂಡಿಗೆ ಬಂದಾಗ
ಮತ್ತೆ ಕತ್ತಲು ಕಾರ್ಯಾಚರಣೆಗೆ.....!


ಮತ್ತೆಂದಿತದು, ನೀ ಹೊಡೆದ ಮೊಳೆಯನ್ನು
ಹಿಡಿದು ನೇತಾಡಿ ಜೋತಾಡಿ,
ಬೇಸಿಗೆಯಲಿ ಬೆವರಿ ಕೈಜಾರುತಿದೆ,
ಚಳಿ-ಮಳೆಗೆ ತಂಪಾಗಿ ಕೈ ಕೊರೆಯುತಿದೆ
ಎಲೈ ಮಾನವ ಸಾಕು ನನಗೆ ಈ ಒಂಟಿ ಬಾಳು
ಬಯಸಿದೆ ನನ್ನ ಮನಸು ಸರಸ – ಸಲ್ಲಾಪ
ಮತ್ತೆ ಉಳಿದೆಲ್ಲ ಹಾಳು ಮೂಳು.....

ಬಿಡುತಿರುವೆ ನೀ ಹೊಡೆದ ಮೊಳೆಯನ್ನು
ಅದೇ ನಾ ಹಿಡಿದ ನಿನ್ನ ಪರೋಕ್ಷ ಕೈಯನ್ನು
ಜಾರಿ ಬಿದ್ದು ನಾನಿನ್ನು
ಒಡೆದುಕೊಂಡು - ಮುರಿದುಕೊಂಡು ಸ್ವಲ್ಪ ಮೂಳೆ ಅಲ್ಲಿ ಇಲ್ಲಿ ಇನ್ನು...
ಸೇರಿ ನಾ ಗುಜರಿಯನ್ನು ಅಂಗಡಿಯನ್ನು
ಸಂಧಿಸಿದರೆ ಸಾಕೆನ್ನಿಸಿದೆ ನನ್ನ ಸಂಬಂಧಿಕರನ್ನು
ತೊಲಗಿಸಲು ಈ ಒಂಟಿ ಬಾಳನ್ನು,
ತೊಲಗಿಸಲು ಈ ಒಂಟಿ ಬಾಳನ್ನು,

ತೊಲಗಿಸಲು ಈ ಒಂಟಿ ಬಾಳನ್ನು.....



Wednesday 19 October 2011

ವಿರಹ ಸೃಷ್ಟಿಸಿದ ಗೊಂದಲ

ತೋಚಿ – ತೋಚಿ ಬರೆಯಲು ಹೊರಟಾಗ ಹೊಳೆಯಿತೊಂದು ಸಾಲು
ಅದೇ ಸಾಲು ಸ್ಪೂರ್ತಿಯಿಂದ ಬರೆದೆ ನಾ ‘ಈ’ ಸಾಲು
ತೋಚದೆ ನನಗೆ ಮುಂದಿನ ಸಾಲು
ನಿಂತಿವೆ ಶಬ್ದಗಳು ತುಟಿಗಳ ಬಿಗಿಹಿಡಿದು ಸಾಲು ಸಾಲು
ಬರೀ ಅವಳ ಕುಡಿ ನೋಟವೇ ಸಾಕು ನನಗೆ
ಬರೆಯಲು ನಾ ಸಾಲುಗಳ ಸಾಲು ಸಾಲು ಸಾಲು .....

ಅವಳಲ್ಲಿ ನಾನಿಲ್ಲಿ...
ಅವಳ ಹೃದಯ ಬಡಿತ ನನ್ನ ಎದೆಯಲ್ಲಿ
ಶಬ್ದಗಳಿಗೂ ವಿರಹ ಬೇನೆ ತಾಕಿದೆ,
ಸ್ಮಶಾನ ಮೌನ ಅವುಗಳ ಡೇರೆಯಲ್ಲಿ
ಒಂದಿಷ್ಟು ಶಬ್ದಗಳು ಕೈ ಜೋಡಿಸಿ ನಿಂತವು
ಆಡಿದವು ಮೌನದಿ ಮಾತು,
ಆದರೂ ಬರೀ ಒಂಟಿ ಸಲ್ಲಾಪಗಳೇ ಅನಿವಾರ್ಯವಾದವು ನನ್ನ ಕಾವ್ಯದಲ್ಲಿ .....

ಅವಳ ‘ನೆನಪು’ ಮಿಸುಕಿ ಸುಮ್ಮನಾಯಿತು
ನನ್ನ ಶಬ್ದಗಳು ಹೊರಡದಂತೆ ‘ಕಾವಲಾಯಿತು ‘
ನಿರುಪಾಯ ನಾನಾಗಿ ಶಬ್ದ ಬಳಕೆಯೇ ಇಲ್ಲವಾಯಿತು
ನಿರುದ್ಯೋಗಿ ಶಬ್ದಗಳ ಆರ್ತನಾದ ಮುಗಿಲು ಮುಟ್ಟಿತು
ಸಾಗಿದೆ ಮುಸುಕಿನ ಗುದ್ದಾಟ ‘ಶಬ್ದ-ಕಾವಲುಗಾರನ’ ಮದ್ಯೆ
ಒಂದು ಕಡೆ ಶಬ್ದಗಳು ಪಿಸು - ಪಿಸು ಎಂದು ಜಾರುವ ಯತ್ನ...
ಇನ್ನೊಂದು ಕಡೆ ನೆನಪು ಮತ್ತೆ ಮತ್ತೆ ಮಿಸುಕಿ ಮಸುಕಾಗಿ ಮಿಂಚುವ ಪ್ರಯತ್ನ.....


*ಡೇರೆ = ಟೆಂಟು, ಗುಡಿಸಲು 

Monday 10 October 2011

ಸೆರಗು


ಸೆರಗು-ಪಂಚೆ ಗಂಟು ಹಾಕಿ ತುಳಿಸಿದರು ಹಿರಿಯರು ಸಪ್ತಪದಿ
ನಾನವಳ ಮುಂದೆ, ಅವಳು ನನ್ನ ಹಿಂದೆ
ಇನ್ನೇನು ಮುಂದೆ?
ಅದೇ, ಸಂಸಾರದ ಝಳಕ್ಕೆ ಪೂರ್ತಿಯಾಗಿ ಬೆಂದೆ

ಬಿಟ್ಟರೂ ಕಷ್ಟ ಹಿಡಿದರೂ ಕಷ್ಟ ಅವಳ ಸೆರಗು
ಬಿಟ್ಟರೆ ರಾತ್ರಿಯಿಡಿ ಪಜೀತಿ
ಹಿಡಿದರೆ ಅಮ್ಮಾವ್ರ ಗಂಡಾಂತ ಆಡಿಕೊಳ್ಳುವ ಲೋಕದ ಪ್ರತೀತಿ
ಏನೂ ತೋಚದೆ ದೃತಿಗೆಟ್ಟವನು ನಾನವಳ ಪತಿ.

ಸತ್ತರೂ ಬದುಕುವ ನಗು


ಮಗುವ ನಗು ನಿನ್ನ ನಗು
ಹಾಲು ನೊರೆ ನಿನ್ನ ನಗು
ನಿನ್ನ ನಗುವಿಲ್ಲದ ನನ್ನ ನಗು
ನಕ್ಕರೂ ಶೋಕದಂತೆ ಕಾಣುವ ನಗು


ಕಳೆದು ಹೋಗಿದೆ ನಿನ್ನ ನಗು
ನನ್ನ ನೆನಪಿನ ಹಿತ್ತಲಲ್ಲಿ
ಮತ್ತೆ ಮುಂದೋಡಿ ಕಾಡಿದೆ
ನೀನಿಲ್ಲದ ಅಂಗಳದಲ್ಲಿ
ಅದೇ ನಾವಿಬ್ಬರು ಬೆನ್ನು-ಬೆನ್ನು ಹಚ್ಚಿ ಕೂರುತ್ತಿದ್ದ ಅಂಗಳದಲ್ಲಿ
ಕೃಷ್ಣ ಪಕ್ಷದ ಬಾನಿನಲ್ಲಿ
ಅದೇ ಚಂದ್ರನಿಲ್ಲದ ಬಾನಿನಲ್ಲಿ.....!


ಚಂದ್ರನಿಲ್ಲದ ಬಾನಿನಲ್ಲೂ ನಿನ್ನ ನಗು ಕಂಡಾಗ
ಅಂದೇ ಹುಟ್ಟಿ-ಸತ್ತ ಕೆಲ ಹೂ-ಬಳ್ಳಿಗಳು ನಕ್ಕವು
ನಕ್ಕು ಮತ್ತೆ ಸತ್ತವು, ಸತ್ತರೂ ಮತ್ತೆ ನಕ್ಕವು
ನಾನೂ ಚೂರು ಹಾಗೆಯೇ ನಿನ್ನ ನಗು ಕಂಡರೆ

ಸಾವು-ಬದುಕು ಎರಡೂ ನಿನ್ನ ನಗುವ ಜೊತೆಯೇನೆ.....! 


ಸಂಘರ್ಷ


ಮೂಸಿಯೂ ನೋಡದ ದೇವರಿಗೂ ರಾಶಿ ರಾಶಿ ಅನ್ನ ನೈವೇದ್ಯ,
ದೇವರು ಕೇಳದಿದ್ರೂ ತಂತಮ್ಮ ಬಾಯಿ ಚಪಲಕ್ಕೆ ಮತ್ತೆ ಪ್ರಾಣಿ ನೈವೇದ್ಯ,
ವಾಂತಿ ಬರೋವರೆಗೂ ತಿಂತಿಯಲ್ಲೋ ಹಸಿದವರ ಮುಂದೆ.....!
ನೀನೇಕೆ ನಿಷ್ಠೂರನಾಗಿರುವೆ ಎಲ್ಲಾ ಕಂಡೂ ಕಾಣದಾಂಗೆ.....?

ಜೀವವಿಲ್ಲದ ಚಿತ್ರಪಟಗಳು ಖುಷಿಪಡತಾವೆ ಬಣ್ಣ ಬಣ್ಣದ ಉಡುಪು ತೊಟ್ಟು,
ನೀ ಬೆಚ್ಚಗೆ ಮಲಗಿರುವಿಯಲ್ಲೋ ದಪ್ಪ ದಪ್ಪ ಕಂಬ್ಳಿ ಹೊದ್ದು.....!
ನಿನ್ನಣ್ಣ ತಮ್ಮಂದಿರ ನೋಡಿದರೆ ಬಾರದೆ ನಿನಗೆ ಕರುಣೆ ಇಷ್ಟೂ.....?

ಏಕೆ ಮೂಢನಾಗುತಿರುವೆ ಸಂಪತ್ತು ಕೂಡಿ ಕೂಡಿ ಇಟ್ಟು.....?

ಸೂರುಗಳಿದ್ದರೂ ಸೋರುತಿವೆ ಮಾಳಿಗೆ, ಕೊರೆಯುತಿದೆ ಮೈ,
ಮತ್ತೆ ಸುಡುತಿದೆ ಅದೇ ಸಂಧಿಯಿಂದ ಎಲ್ಲ ಕುಚೇಲರ ನೆತ್ತಿ.
ಅವನಿದ್ದ ಜೋಪಡಿಗೆ ಕೃಷ್ಣನೂ ಹೋದ ಪರಮಾತ್ಮನಾಗಿದ್ದು ಗೆಳೆಯನಾಗಿ.....!
ಇದೆಂಥಾ ಅಸುರತನ ಮೆರೆಯುತ್ತಿದ್ದೀರಿ ಮಾನವನಾಗಿದ್ದೂ ಮಾನವನಾಗಲು.....?
ಏಕೆ ಈ ಹಿಂದೇಟು ಅವರ ಕಷ್ಟ ನಿವಾರಿಸಲು.....?




ಪಾನಮತ್ತ ನಯನ


ತುಳುಕಿಸು ನಿನ್ನ ನಯನದಿಂದ ನಶೆಯೇರಿಸುವ ಪಾನ
ಈಜು ಬಂದರೂ ಮುಳುಗುವ ಬಯಕೆ ಹುಟ್ಟಿಸೋ ನಿನ್ನ ಮತ್ತಿನ ಪಾನ
ಮುಳುಗಿ ದಡ ಸೇರಿದರೂ ಮತ್ತೆ ಜಿಗಿಯುವ ಹಠ ನನ್ನಲ್ಲಿ
ನಿನ್ನ ನಶೆಯೇರಿಸುವ ಪಾನ ಬತ್ತುವವರೆಗೂ ನನ್ನ ಉತ್ಸಾಹ ಕಡಿಮೆಯಾಗದಿಲ್ಲಿ

ಓ ಮುಗ್ಧ ಮುದ್ದು ಕೊಲೆಗಾರಳೆ
ಏಕೆ ಕೊಲ್ಲುತಿರುವೆ ಈ ಪರಿ
ನಿನ್ನಂತರಂಗ ಮೀಟಲು ನನಗವಕಾಶ ಬೇಕಿದೆ ಒಂದು ಸಾರಿ
ಕೊಡುವುದಾದರೆ ಹೇಳು ಎನಗೆ ಸರಿ
ನನ್ನ ಜರಿಯದೆ ನನ್ನತ್ತ ಜರಿ
ಹರಿಸುವೆ ನಾ ಪ್ರೇಮದ ಝರಿ
ಆದರೆ ಸುಮ್ಮನೆ ಮೋಜಿಗೂ ನೋಡಬೇಡ ನನ್ನತ್ತ ನೀ ಕೊಲ್ಲುವ ಪರಿ

ಈ ಕೆಂಬಣ್ಣ ಯಾವಾಗ ನನ್ನ ಕೈಬಿಡುವುದೆಂದು ನನಗರಿಯದು
ಅದು ನನ್ನ ಕೈಬಿಡುವುದರೊಳಗೆ ನೀ ಹಿಡಿದರೆ ಒಳ್ಳೆಯದು
ಇಲ್ಲವಾದರೆ ಕೆಂಪು ಪಾನ – ಕಣ್ಣ ಬಾಣಗಳ ಚಕ್ರವ್ಯೂಹ ಕೊಲ್ಲದೆ ನನ್ನನ್ನು ಸುಮ್ಮನಿರದು.....!



*ಕೆಂಬಣ್ಣ = ಸಾರಾಯಿ


ನಿನ್ನೊಲವ ಉಣಬಡಿಸು


ಓ  ಹೂವೇ  ಮುನಿಸೇಕೆ
ಇಷ್ಟು ದೂರ ಉಚಿತವೇ?
ಬಳಸು ಬಾ ನನ್ನನು
ಇಷ್ಟು ವಿರಹ ಸಾಲದೇ?

ಮೌನದ ದೀಪ ಹಚ್ಚಿರುವೆ ನನ್ನ ಸುತ್ತ ಮುತ್ತ
ನಾನೆಷ್ಟು ಜೋರಾಗಿ ಕೂಗಿದೆ ನಿನ್ನ ಹೆಸರು ಆದರೂ ಮೌನದ ಪ್ರತಿಧ್ವನಿಯೇ ನನ್ನ ಸುತ್ತ
ನನ್ನೊಳಿರುವ ನಿನ್ನನು ಮಾತಾಡಿಸಿದರೂ ಮೌನದ್ದೇ ಮಾತು
ಈ ಮೌನದ ಕಾರಬಾರು ಸಂತೆ ನನಗಂತೂ ಸಾಕು

ದೇವರೇ ಕಸಿಮಾಡಿದ ಜೋಡಿ ನಮ್ಮದು
ಭಿಕಾರಿ ಪ್ರೇಮಿಯಾದೆ ನಿನ್ನ ವ್ಯಾಮೋಹದಲ್ಲಿಂದು
ಪ್ರೀತಿಯ ಪಟ್ಟಾಭಿಷೇಕ ಮಾಡು ಬಾ ನನಗೆ ನೀನಿಂದು
ನಾನೇ ದೊರೆಯಾಗುವಾಸೆ ನಿನ್ನ ಹೃದಯ ಸಾಮ್ರಾಜ್ಯಕ್ಕೆಂದೆಂದು


ಒಲವಿದ್ದರೂ ಏಕೆ ಈ ಕಣ್ಣಾಮುಚ್ಚಾಲೆ
ಪ್ರಣಯದ ಸಾಂತ್ವನ ಹೇಳು ಬಾ ಈಗಲೇ
ತುಟಿಗಳ ಸಂಧಿಯಲ್ಲಿ ಬಚ್ಚಿಟ್ಟ ಮೂರು ಮಾತನು ಹೇಳಿಬಿಡು ನಿಂತಲ್ಲೆ

ನೀನೆ, ಬರೀ ನೀನೆ ತುಂಬಿರುವೆ ನನ್ನ ಹಾಡಿನ ಶೀರ್ಷಿಕೆ-ಭಾವಾರ್ಥದಲ್ಲೆ.....

ನೀ ಭಕ್ತಿಪ್ರದಾಯಕ


ಪ್ರಫುಲ್ಲನಾದೆ ಪುಳಕಿತನಾದೆ ನಿನ್ನ ಲೀಲೆಯ ಕಂಡು
ನೀನು ನನ್ನ ಮೇಲೆ ಅಸ್ತು ಎಂದು ಇಟ್ಟ ಹಸ್ತವ ಕಂಡು
ನೀನು ನನ್ನ ಮೇಲೆ ನೆಟ್ಟ ನೋಟವ ಕಂಡು
ಹೀಗೆ ಹರಿಸು ನನ್ನನು ಮಗುವಂತೆ
ತಾಯಿ ಕಂದಮ್ಮನನ್ನು ಸಲಹುವಂತೆ
ಮತ್ತೆ ಮತ್ತೆ ಹರಿಸು ನನ್ನನು ನನ್ನ ಅಹಂ ನಿನ್ನ ಧುನಿಯಲ್ಲಿ ಸುಟ್ಟು ಭಸ್ಮವಾಗುವಂತೆ
ನನ್ನಲ್ಲಿರುವ ಶ್ರದ್ಧೆ-ಭಕ್ತಿ ಇಮ್ಮಡಿ-ಮುಮ್ಮಡಿ ಆಗುವಂತೆ
‘ಸಾಯಿ’ ಸ್ಮರಣೆ ಸದಾ ಮಾಡುವಂತೆ
ನನ್ನ ಸ್ಮೃತಿ ಪಟಲಕ್ಕೆ ನೀನೆ ಒಡೆಯನಾಗುವಂತೆ

ನಿನ್ನಿಚ್ಚೆಯಂತೆಯೇ ನೀ ಬರೆಸಿದೆ ಇದನು ನನ್ನಿಂದ......

ನಮ್ಮತನ


ಯಾಕಾದ್ರು ಬಂದೇ ನನ್ನ ಜೀವನದಲ್ಲಿ ಅಂದಳು ಅವಳೊಂದು ದಿನ
ಆದರೂ ನಾ ಭೇಟಿಯಾದಾಗಲೆಲ್ಲ ಆ ಮುಖದಲ್ಲೇನೋ ಹೊಸತನ
ಮರೆತೆ ನಾ ನನ್ನತನ, ಅವಳು ಅವಳ ತನ್ನತನ
ಗೊತ್ತೆಯಾಗಲಿಲ್ಲ ಸಂಭೋದನೆಗಳು ತಿರುಗಿದ್ದು ನಮಗೆ ಬಹುವಚನದಿಂದ ಏಕವಚನ

ನಮ್ಮತನ ಬೆಳೆಸಿಕೊಂಡೆವು ನನ್ನತನ್ನಗಳ ಬಿಟ್ಟು
ಶಾಲಾ ಮಕ್ಕಳಂತೆ ಕಿತ್ತಾಡಿದೆವು ಕ್ಷುಲ್ಲಕ ಕಾರಣ ಮುಂದೆ ಇಟ್ಟು
ಒಬ್ಬರ ಮೇಲೊಬ್ಬರು ಏನೇನೋ ಅಂದುಕೊಂಡೆವು ಸ್ವಲ್ಪ ನಾಚಿಕೆ ಬಿಟ್ಟು
ಮರುಕ್ಷಣವೇ ಮತ್ತೆ ಒಂದಾದೆವು ಎಲ್ಲ ಸ್ವಾಭಿಮಾನವ ಬಿಟ್ಟು

ಕಳೆದಿವೆ ನನ್ನ ನಿನ್ನ ಸ್ನೇಹ ಬೆಳೆದು ಮೂರನಾಲ್ಕು ವಸಂತ
ಅಂದಿನಿಂದ ಇಂದಿನವರೆಗೂ ಲೋಕವೆಲ್ಲ ಸ್ತಬ್ಧಚಿತ್ರವಾಗಿ ನೀನೊಬ್ಬಳೆ ಜೀವಂತ
ಓಡುತಿಹರು ಜನರು ಏಕಚಿತ್ತದಿಂದ ಗುರಿಯನರಸಿ ಅತ್ತಿತ್ತ

ನಾನೆತ್ತ ಓಡಲಿ ಎನ್ನ ಚಿತ್ತ ನೀನಾಗಿರಲು, ಎನ್ನ ಗುರಿಯೇ ನೀನಾಗಿರಲು.....?




ಮುತ್ತಿನ ಗಮ್ಮತ್ತು...!


ಮರೆತೆ ಅಂತ ನಿನ್ನನು ಹೇಗೆ ಹೇಳಲಿ, ನೀನು ಇತ್ತ ಮುತ್ತನು ಹೇಗೆ ಮರೆಯಲಿ
ಬೇಡವಾಗಿದೆ ಎನಗೆ ನಿನ್ನನ್ನಾಲಿಸದ ಮುಂಜಾನೆಗಳ ಸಮರ್ಪಣ
ಕಾಣದಾದಾಗ ನಿನ್ನ ಮೊಗವ, ಆ ದರ್ಪಣಕ್ಕೂ ತರ್ಪಣ
ಕಾಣದಾದಾಗ ನಿನ್ನ ನೆರಳು, ಆ ದಿನ ದೇವಾದಿ ದೇವತೆಯರಿಗೂ ತರ್ಪಣ ತರ್ಪಣ ತರ್ಪಣ.....!

ನಿನ್ನ ಮುತ್ತಿನ ಪರಿಣಾಮ ನೋಡೆ, ಬಣ್ಣ ತುಂಬಿದ್ದರೂ ಬರಿದಾಯ್ತು ಗೋಡೆ
ನೋಡೆ ನೋಡೆ ನೋಡೆ ಕಣ್ಣ ಎವೆ ಬಡಿಯದೆ ನೀ ನೋಡೆ
ಎನ್ನ ವಿವೇಚನೆಯೇ ಏನಗೆ ದಿಗ್ಭ್ರಾಂತಿ ತಂದಿರಲು
ನಿನ್ನ ದನಿ ಮೊಗ ನೆರಳುಗಳ ಬಲೆಯಲ್ಲಿ ಜೇಡಿನಂತೆ ನಾ ಸಿಲುಕಿರಲು
ಬಿಟ್ಟೆ ನೀ ಇನ್ನೊಂದು ಬಾಣ ಶಾಶ್ವತವಾಗಿ ಗಲ್ಲಿಗೇರಲು
ಅದುವೇ ನೀ ನಿನ್ನ ಲಗ್ನ ಗಟ್ಟಿಯಾಯಿತೆನಲು.....!

ಇದ್ದೇ ನಾ ನನ್ನ ಪಾಡಿಗೆ ಅವರಿವರ ನೋಡ್ಕೊಂಡು
ಪ್ರೀತಿ ಸಿಗದಿದ್ದರೂ ಬೇರೆಯವರ ಪ್ರೀತಿಯಲಿ ಪ್ರೀತಿ ಕಂಡ್ಕೊಂಡು
ಬಂದೆ ನೀ ಲೈಫಿನಲಿ ಬಳ್ಕೊಂಡು ಬಳ್ಕೊಂಡು
ಆ ಬಳುಕಿಗೆ ಸೋತ ಮನ, ಮನದೊಳಗೆ ಪ್ರೀತಿಸಿತು ಮುದ್ದಿಸಿತು ಬಾಚ್ಕೊಂಡು ಬಾಚ್ಕೊಂಡು
ನನ್ನ ಮನದಾಳರಿತೋರಿಯದೆ ಕೊಟ್ಟೆ ನೀ ಸಿಹಿ ಮುತ್ತ ಅಪ್ಕೊಂಡು ತಬ್ಕೊಂಡು
ಹಾಳಾದ್ದು ಅವತ್ತೇ ಯಾಕೆ ಅನಿಸ್ಲಿಲ್ಲ್ವೋ ಗೊತ್ತಿಲ್ಲ ಹಗಲು ಕಂಡ ಬಾವಿ ಅಂತು(ಅಂತ)

ಆದರೂ ಹೇಗೆ ಮರೆಯಲಿ ನಾ ಹೇಗೆ ಮರೆಯಲಿ
ಮೊಗ, ಮುತ್ತ, ಬಳಕು, ದನಿ, ನೆರಳುಗಳ ಸಂಭ್ರಮವ

ಹೇಗೆ ಮರೆಯಲಿ ನಾ ಹೇಗೆ ಮರೆಯಲಿ. 


ಮೃದು ಬಲ


ನಮ್ಮೂರಿಗೆ ನೀ ಬಂದ ಹೊತ್ತು
ಅದು ಆ ಹೊತ್ತು ಮುಳುಗುವ ಹೊತ್ತು
ಬೀಸಿತ್ತು ಗಾಳಿ ಇನ್ನಿಲ್ಲದಷ್ಟು
ಜಡಿದಿತ್ತು ಅಡ್ಡಮಳೆ ತುಂಬಾ ಹೊತ್ತು
ತಂದಿತ್ತು ಅದು ಅದರ ಜೊತೆ ಆಲಿಕಲ್ಲನ್ನು ಹೊತ್ತು
ಮಳೆರಾಯ ಭುವಿಗೆ ಬೇಡೆಂದರೂ ಒತ್ತಿ ಒತ್ತಿ ಚುಂಬಿಸಿದಂತಿತ್ತು

ಮಗುವಂತೆ ಆಯುತ್ತಿದ್ದೆ ಆಲಿಕಲ್ಲನ್ನು
ಕೃಷ್ಣ ಕದ್ದೊಡಿದ ಹಾಗೆ ಅಂಗೈಯಲ್ಲಿ ಬೆಣ್ಣೆಯನ್ನು
ನಿನ್ನಾಟವ ನೋಡಿ ಮೊಳಕೆಯೊಡೆಯಿತು ನನ್ನಲ್ಲಿ ಶೃಂಗಾರ ಲಹರಿಯು
ಆಯ್ದು ಅವುಗಳನ್ನು ಹಾಕಬೇಕೆನಿಸಿತು ನಿನ್ನ ಮೈಗೆ ಕಚಕುಳಿಯತರಲು
ನಿನ್ನ ನಗಿಸಲು, ನಾ ನಗಲು....
ಬೇಕಂತಲೇ ನಾವಿಬ್ಬರೂ ದಾರಿಯ ತಪ್ಪಲು.....!

ಮಳೆರಾಯನ ಬಲವಂತ ನನಗೆ ಬಾರದು
ಬಂದರೂ ಬಲವಂತದ ಶೃಂಗಾರ ಮೋಜು ಕೊಡದು
ಅದಕ್ಕೆ ಕೊಂಚ ಹೊತ್ತು ನಾ ಭೂಮಿ ನೀ ಮಳೆರಾಯನಾಗು
ನಿನ್ನ “ಮೃದು ಬಲವಂತ” ಆ ರತಿ-ಮನ್ಮಥರನ್ನು ನಾಚಿಸಬಹುದು.....!

ಮನ್ಮಥನು ತನ್ನಿರುವಿಕೆ ವ್ಯರ್ಥವೆಂದು  ಕಾಮಬಾಣವನ್ನೇ ಸುಟ್ಟುಹಾಕಬಹುದು.....!




ಮೊದಲ ಸಿಂಚನ


ಕ್ಲಾಸಿನ ಕೊನೆಯ ಬೆಂಚಿನ ತುದಿಯಲ್ಲಿ ಕೂತ ನಿನ್ನನು ನೋಡಿತೀ ಮನ,
ನೋಡಿದಾಕ್ಷಣವೇ ಜೀವನಪೂರ್ತಿ ದಂಡತೆತ್ತಲು ಒತ್ತಾಯ ಮಾಡಿತೀ ಮನ,
ಅದಕ್ಕೆ ನೀನು ಎದೆಗೊತ್ತಿದ ಮಣ ಭಾರದ ಪುಸ್ತಕಗಳೇ ಸಾಕ್ಷಿ.....!

ಕೂತು ಕಲ್ಲಾಯಿತೀ ಮನ,
ನಿಂತ ನೀರಾಯಿತೀ ಮನ,
ಸಾಕ್ಷಾತ್ ಸರಸ್ವತಿ ದೇವಿಯೇ ಒಲಿದು ಧರೆಗಿಳಿದು ಬಂದರೂ
ಸೌಂದರ್ಯ ಲಕ್ಷ್ಮಿಯನ್ನು ಬಿಡಲೊಲ್ಲದ ಈ ಮನ.....!

‘ನೀನೆಂದರೆ ಇಷ್ಟ ‘ ಎಂದು ಹೇಳಲು ತವಕಾಡಿತೀ ಮನ
ತವಕದ ನೋವನರಿತ ಅವಳ ಮನ, ಏನೂ ಹೇಳದೆ ಹೋದರೂ

ಏನೋ ಮಹತ್ ಸಾಧಿಸಿದ ಧನ್ಯತಾ ಭಾವ ಈ ಮನಕ್ಕೆ.....!


ಮನ ತೂಗುಯ್ಯಾಲೆ


ನೀನಿಲ್ಲದ ಹಾಸಿಗೆ
ಮುಳ್ಳಿನ ತೂಗುಯ್ಯಾಲೆಯಾಯಿತು
ನಾನು ಪಟ್ಟ ಪಾಡು
ಭೀಷ್ಮನಿಗಿಂತ ಅತೀಯಾಯಿತು

ನೀ ದೂರ ಹೋದಾಗ
ಸೇರಬೇಕೆನ್ನುವ ಆಸೆ
ನೀ ಬಳಿ ಸೇರಲು ಬಂದಾಗ
ಪ್ರತಿಧ್ವನಿಸುತ್ತೆ ಈ ಮನ ಇದು ಪಾಪ ಓ ಕೂಸೆ ಇದು ಪಾಪ
ಮಂಜಿನಂತೆ ಮಸುಕಾಗಿರಲು ನಮ್ಮ ಭವಿಷ್ಯ
ಏಕೆ ಈ ಎಡವುವಾಸೆ? ಏಕೆ ಈ ಎಡವುವಾಸೆ?

ಮೋಡಗಳೆಲ್ಲ ತಬ್ಬಿಕೊಂಡಿರಲು ಚಂದ್ರಮನನ್ನು
ತಪ್ಪಿ ಅದ ನಾ ನೋಡಿದಾಗ
ಮತ್ತೆ ಹಾಡಿತು ಕೋಗಿಲೆ ಮುಂದಿಟ್ಟಿತು ಅದೇ ಆಸೆ
ಛೆ, ಏನು ಹೇಳಲಿ ಮತ್ತೆ ಅದೇ ಮುಳ್ಳಿನ ಹಾಸಿಗೆ,
ಅದೇ ಭೀಷ್ಮ ಸಂಕಟ, ಅದೇ ಪಾಪ ಪ್ರಜ್ಞೆ.....!

ನೀವೇ ಹೇಳಿ ಯಾವುದು ಉಚಿತಾನುಚಿತ.....?


ಹುಳಿಮಾವು


ನೀನು ನನಗೆ ದೇವರು ಕೊಟ್ಟ ಉತ್ಪ್ರೇಕ್ಷಿತ ವರವಾದಂತಾಗಿದೆ
ಮಾಮರವೆಲ್ಲೊ ಕೋಗಿಲೆ ಅಲ್ಲಿರುವ ಬದಲಾಗಿ ಕೋಗಿಲೆ ಇರುವಲ್ಲಿಗೆ ಮಾಮರ ಬಂದಂತಾಗಿದೆ
ನಿನ್ನ ಸೃಷ್ಠಿ ಅವನಿಗೂ ದಿಗ್ಭ್ರಾಂತಿ ಮೂಡಿಸಿದೆ
ಕೊಟ್ಟ ವರವ ಹಿಂಪಡೆಯಲಾರದೆ ಅತ್ತು ಹೊರಳಾಡಿದಂತಿದೆ


ನಿನ್ನ ಹುಳಿಗೆನ್ನೆ ರುಚಿಸುವಾಸೆ ನಮ್ಮ ಪ್ರೇಮ ವಸಂತದಲ್ಲಿ
ಅದ ನಾ ಬಾಯ್ಬಿಚ್ಚಿ ಹೇಳಿದಾಗ ನಾಚಿ ನಿಂತೆ ನೀ ಹೊಸ್ತಿಲಲ್ಲಿ
ಬರಸೆಳೆದು ಬಳಿ ಬಂದು ನಿಂತಾಗ ನಾ ಅದ್ಯಾವುದೋ ಭಯ ಕಣ್ಣಂಚಿನಲ್ಲಿ
ಮತ್ತೆ ಮುಗ್ಧ ಕೋಪ ಮೂಗಿನ ತುದಿಯಲ್ಲಿ

ಮಧುಮಾಸ ಚಂದ್ರಮನು ಅಂಗಳದಲಿ ಮುಕ್ಕಾಮು ಹೂಡಿರಲು
ಬಂದಳಾ ನೈದಿಲೆ ನನ್ನತ್ತ ಸಂಭ್ರಮದಲಿ
ನಿನ್ನೆ ನರ್ತಿಸುತ್ತಿದ್ದ ಮೂಗತುದಿ ಮುಗ್ಧ ಕೋಪ ಮೂಗಿನಿಂದ ಜಾರಿ ಕೆಂದುಟಿಗೆ ಬಂದಿರಲು
ನೀಡಿದಳು ಒಳಗೆ ಆಮಂತ್ರಣವ ಬೆರಳಿನಿಂದ ಸೆರಗ ತುದಿ ತಿರುಗಿಸುತ್ತಲೇ ಕಾಯಿ ಮಾವು ತಿಂದು ಬರಲು
ಹೊರಟೆ ನಾನೀಗ ಒಳಗೆ ಆ ಸೆರಗ ತೋರುವ ದಾರಿಯಲಿ
ಸದ್ಯ ಹುಳಿ ಮಾವು ಹಳಿ ತಪ್ಪಿಸದಿದ್ದರೆ ಸಾಕು.....!





ಅವರಿವರ ನಡುವೆ ಪ್ರೇಮ ಕವನ


ಅತ್ತ ಉರಿದುರಿದು ತಣ್ಣಗಾದ ಕೆಂಪಗಾದ ಅವನು
ಇತ್ತ ಸಂಜೆ ಪೂರ್ಣವಾಗಿ ಚೆಂದವಾಗಿ ವೆಷ್ಯೇಯಂತೆ ವಿಹಾರ ಹೊರಟ ಇವನು
ಅವನೋ ಲೋಕದ ಚರಾಚರಗಳಿಗೆ ಸಂಜೀವಿನಿ
ಇವನೋ ನಿರ್ಜೀವ ಜೀವಗಳ ಸರಸ-ಸಲ್ಲಾಪಗಳನ್ನುತ್ತುಂಗಕ್ಕೇರಿಸುವ ಮಾಯಾ ಮೋಹಿನಿ

ಅತ್ತ ಅವನು ಬೀಳುತಿರಲು
ಇತ್ತ ಇವನು ಏಳುತಿರಲು
ನಾ ಬರೆದೆ ಪ್ರೇಮ ಕವನ ಭೂ ತಾಯಿಯ ಎದೆಯ ಮೇಲೆ
ಅಣುಕಿಸಲೆಂಬಂತೆ ಅಳಿಸಿ ಹಾಕಿತದನು ಹೊಯ್ದು ನೀರದರ ಮೇಲೆ

ನೀರ್ ಮಾಡಿದ ಅಕೃತ್ಯಕ್ಕೇ ನಾಲ್ವರೇ ಸಾಕ್ಷಿ
ಅಮ್ಮ(ಭೂತಾಯಿ) ನಾನು ಅವನು ಮತ್ತಿವನು
ಅವನೋ ತಣ್ಣಗಾದವನು  ಉರಿದು ಕೋಪಿಸಿದ
ಇವನೋ ‘ಕಪ್ಪು ಕಲೆ ಸುಂದರ’ ಸುಮ್ಮನಿರದೆ ನಕ್ಕು ಸಂಭ್ರಮಿಸಿದ
ಅಮ್ಮ ಹಣೆ ಚುಂಬಿಸಿ ಮತ್ತೆ ಬರೆಯದನೆಂದು ಕಡ್ಡಿಯಿತ್ತು ಸ್ಪಂದಿಸಿದರೆ

ಈ ಗೊಂದಲಗಳ ಸಂಧಿಯಲ್ಲಿ ನನ್ನ ಭಾವನೆಗಳ ಮೇಲ್ ಸಂಶಯ ಬಂದು
ಮಸುಕಾಗಾದ್ರು ಉಳಿದಿದ್ದ ಪ್ರೇಮ ಕವನ ತಿದ್ದೋಣ ಅಂದ್ರೆ
ಮಳೆರಾಯನೂ ನನ್ನ  ಛೇಡಿಸುವುದೇ.....?

ಜವರಾಯನೂ ನನಗವಕಾಶಕೊಡದೆ.....! 


ಅವಳ ಮೌನಕ್ಕೆ ಪ್ರಕೃತಿ ಸ್ಪಂದನ


ಸದ್ದಡಗಿದೆ ಎಲ್ಲ ಬಣ್ಣಗಳ ಚಿತ್ತಾರ
ಓ ಮೂಕ ಕೋಗಿಲೆಯೇ.....
ದಯಮಾಡಿ ತೆರೆ ನಿನ್ನ ವಾಕ್ ಭಂಡಾರ
ಕೇಳಿಸದೆ ನಿನಗೆ ಈ ಮೂಕ ದನಿಯ ಕಾತರ

ಬರಡಾಗಿದೆ ಸಪ್ತ ಸ್ವರಗಳ ಆಗರ

ನಿನ್ನ ಮೌನವನ್ನೇ ಅನುಕರಿಸಿವೆ ನೋಡು ಈ ಹಕ್ಕಿಗಳ ದಂಡು
ಕಡಲ ತೀರದ ಭೋರ್ಗರೆತವೂ ಮೌನವಾಗಿದೆ ನಿನ್ನ ಮೌನವ ಕಂಡು
ಕಾದಿರುವರು ಸೂರ್ಯನನ್ನು ಆ ನಾಡಿನೊಳಗೆ
ಮುಳುಗದೆ ಈಜುತಿಹನು ಕಿರಣಗಳ ಬಡಿಬಡಿದು
ನೀ ಬಾಯ್ಬಿಟ್ಟಿಯೆಂದು,
ನೀ ಮಾತಾಡಿಯೆಂದು,
ನೀ ನಸುನಕ್ಕಿಯೆಂದು.

ಈ ವಿಸ್ಮಯ ನೋಡುತಿಹ ಚಂದ್ರನೂ
ಸಂಕಟಪಟ್ಟ ಅಸೂಹೆಯಿಂದ
ನನಗಿಲ್ಲದ ಕಾಳಜಿ ಇವಳಿಗೆಕೆಂದು.....?
ನನ್ನಂದಕ್ಕಿಲ್ಲದ ಮೋಹ ಇವಳಂದಕ್ಕೆಕೆಂದು.....?






ಆಗಮ – ಆದೇಶ ಲೋಪಮಯ


ನಿನ್ನಾಗಮನ,
ಹುಣ್ಣಿಮೆಯ ಬೆಳದಿಂಗಳಲ್ಲೂ ಮೋಡಗಳಿಲ್ಲದೆ ತುಂತುರು ಸುರಿದಂತಾಯಿತು
ಭುವಿ ಕೆಸರಾಗದೆ ನಿನ್ನ ಹೆಜ್ಜೆ ಮೂಡಿದಂತಾಯಿತು
ಸಾಗರ ದಡದಲ್ಲಿ ತೆರೆ-ತೀರ ನಿಂತು ಹರಟಿದಂತಾಯಿತು
ಸೂರ್ಯ ಪ್ರಕಾಶನಾಗದೆ ಹೂವೇ ಜೇನುಗೂಡಿನಲ್ಲರಳಿದಂತಾಯಿತು
ಜೇನು ಹೂವಿನಲ್ಲಿ ಗೂಡುಕಟ್ಟಿದಂತಾಯಿತು
ಇದ ಕಂಡ ಕಾಮಣ್ಣನಿಗೂ ಮಂಪರು ಬಂದಂತಾಯಿತು 

ನಿನ್ನಾದೇಶಕ್ಕೆ,
ಹುಣ್ಣಿಮೆಯೂ ಕರಗಬೇಕೆ
ಬೆಳದಿಂಗಳ ರಾತ್ರಿಯಲ್ಲೂ ಬಿಸಿಲ ಹಬೆಯಾಡಬೇಕೆ
ಮೂಡಿದ ಹೆಜ್ಜೆ ಪಾದುಕೆಗಳಾಗಬೇಕೆ
ಈಗಿರುವ ತುಂಬು ಸಂಸಾರದಿಂದ ಹೂವುಜೇನು – ಜೇನುಹೂವೆಂಬ ಹೊಸ ಅನ್ವರ್ಥಗಳು ಹುಟ್ಟಬೇಕೆ
ತೆರೆ ತೀರದ ಆಳ, ತೀರ ತೆರೆಯ ಆಳವನ್ನು ಸಂಧಿಸಿ ಅರ್ಥೈಸಬೇಕೆ, ಅರ್ಥೈಸಿ ಮತ್ತೆ ಸಂಧಿಸಬೇಕೆ

ಅಬ್ಬಾ!! ಇನ್ಮುಂದೆ ಶೃಂಗಾರವನ್ನರಸಿ ನಿನ್ನ ಪೂಜೆಯೂ ಆಗಬೇಕೆ ?






ಸ್ಪೂರ್ತಿ, ಕುಮ್ಮಕ್ಕು ಮತ್ತು ನನ್ನ ಕವನ


ನನ್ನೆಲ್ಲ ಕವನಕೆ ಸ್ಪೂರ್ತಿಯ ಚಿಲುಮೆಯಾದೆ
ಆ ಘೋರ ಚಳಿಯಲ್ಲೂ ಬೆಚ್ಚನೆಯ ಹಬೆಯಾದೆ
ಸ್ಪಂದಿಸದೆ ಹೋದಾಗ ನನ್ನ ಪ್ರೀತಿಗೆ ನೀನು ಭಾವನೆಗಳೆಲ್ಲಾ ಹೆಪ್ಪುಗಟ್ಟಿವೆ
ಒದ್ದಾಡಿ ಹೋದೆ ನೀ ಸುಮ್ಮನಿರುವಿಕೆ ಕಂಡು
ಬರೆಯದೆ ಹೋದೆ ನಾ ಕವನವ
ಕೇಳೆಂದಿದೆ ಎನ್ನ ಮನ ಏನು ನಿನ್ನ ತಗಾಧೆ ಎಂದು.....?

ಬಾರದೆ ಬರೆದೆ ಗೆಳೆಯನ ಕುಮ್ಮಕ್ಕಿನಿಂದ
ಬರೆದು ಬರಿದಾಗುವಾಸೆ ನಿನ್ನ ಸ್ಪೂರ್ತಿ ಸ್ಪರ್ಷದಿಂದ
ಆಗಲಿ ನಮ್ಮ ಸಂಬಂಧ ಚರಣ-ಪಲ್ಲವಿಗಳ ಅನುಬಂದ
ಆಗದಿರಲಿಯದು ತಾತ್ಕಾಲಿಕ ಹುಲ್ಲು-ಮಂಜಿನ ಸಂಬಂಧ
ಮತ್ತಾಗಲಿಯದು ಕವಿ-ಸಹೃದಯರ ಸಂಬಂಧ

ಆದಿ-ಅಂತ್ಯ ನೀನಾಗಿರಲು ನನಗೇಕೆ ಬೇರೆಯ ನಂಟು
ನಿನ್ನ ಮುದ್ದು ಮೊಗ ಜೊತೆಗಿರಲು ನನಗೆ ನೀನೆ ನಿಘಂಟು
ಈ ನಂಟಿನಂಟಲಿ ಕಮಟು-ಗಿಮಟು, ಒರಟು-ಮರಟು ಬಂದಾಗ ಬಿಡು ನೀ ನಗುವಿನ ಬಾಣವೊಂದು
ಮತ್ತೆ ಬರೆಯುವೆ ಬರಿದಾಗುವವರೆಗೂ ಅದನ್ನೇ ನೆಚ್ಚಿಕೊಂಡು

ಯಾಕೆ ? ನೀನಗೊತ್ತಿಲ್ವಾ ನನ್ನ ಕವನದ ತಳಹದಿ ನಿನ್ನ ನಗು ಎಂದು.