Total Pageviews

Tuesday 20 October 2015

ಬಿಂದಿ

ಅಲ್ಮಾರಿಯ ಮೇಲೆ ನೀನಂಟಿಸಿದ
ಬಿಂದಿಯ ಸುತ್ತ ನಿನ್ನ ಹೋಲುವ ಚಿತ್ರ ಬಿಡಿಸಬೇಕೆನಿಸಿತು
ಜೀವ ತುಂಬಲಸಾಧ್ಯವಾದರೂ
ನೀ ಸೃಷ್ಟಿಸಿ ಹೋದ ನಿರ್ವಾತಕ್ಕೆ ಜೀವ ತುಂಬುವ ಪ್ರಯತ್ನದಲ್ಲಿರುವೆ...

ಗದ್ದ-ಕೆನ್ನೆ ಹಿಡಿದು ಮುದ್ದಾಡುವೆ
ನೋಡುವೆಯಾ ನೀ ಕಣ್ಣಲ್ಲಿ ಕಣ್ಣಿಟ್ಟು ಕಣ್ಣ ರೆಪ್ಪೆಯ ಸಡಲಿಸಿ ?
ಆ ಮುಂಗುರುಳನು ಮಾತ್ರ ನಾ ಬಿಡಿಸೆನು
ನಮ್ಮ “ಕಣ್ಣ ಮಿಲನ”ಕೆ ಕರಡಿಯ ಪ್ರವೇಶ ನಿಷಿದ್ಧ...

ಮೂಗು-ಮುಂಬೊಟ್ಟಿನ ತುದಿಯಲಿ ಯಾವುದೋ
ತಂತಿಯ ಗುಂಜನ...ಸಂಗೀತ ಸಮ್ಮೇಳನ...
ಕೆಂದುಟಿಯನು “ಬಿಡಿಸಲು” ಹೃದಯದ ಕಂಪನ
ನೆನಪಾಯಿತು ನೀ ಹರಿಸಿದ ಮೊದಲ ಮುತ್ತಿನ ಸಿಂಚನ

ಹಣೆಯ ಮೇಲೆ ಹುಬ್ಬು ಕೊರೆದೆ
ಹುಣ್ಣಿಮೆಯ ದಿನ ಸಾಗರಲೆಗಳ ಏರಿಳಿತದಂತೆ...ಚಂದಿರೆಯು ನಾಚುವಂತೆ...
ಕಿವಿ-ಕಿವಿಯೋಲೆ ಬರೆದೆ
ನನ್ನ ಕಂಪನ ನಿನಗೆ ಕೇಳಿಸಲೆಂದು,
ಆದ್ರೆ ಜೋತಾಡುವ ಕಿವಿಯೋಲೆಗಷ್ಟೇ ಕೇಳಿಸಿದಂತಿತ್ತು ನನ್ನ ಆರ್ತನಾದ...!

ಚಿತ್ರ ಬರೆದೆ ಬಿಂದಿ ಕಿತ್ತೆಸೆದೆ ನಿನ್ನಲ್ಲಿ ನಾನಿಲ್ಲ!
ಕಿತ್ತೆಸೆದ ಬಿಂದಿಯನು ಕನ್ನಡಿಯ ಮೇಲಂಟಿಸಿದೆ,
ಅಂಟಿಸಿದ ಬಿಂದಿಯೊಟ್ಟಿಗೆ ನನ್ನ ನಾ ನೋಡಿದಾಗ
ನನ್ನಲ್ಲಿ ನೀನಿದ್ದೆ...ನಿನ್ನಲ್ಲಿ ನಾನಿದ್ದೆ...
ನಿನ್ನ ಹೀಗೆ ನೆನೆ ನೆನೆದು 
ಮನವಾಯಿತು ಪ್ರೇಮ ಮಳೆಯಲ್ಲಿ ಒದ್ದೆ ಒದ್ದೆ ಒದ್ದೆ...