Total Pageviews

Thursday 23 January 2014

ಒಂಟಿ ಸಲ್ಲಾಪ

ವಿರಹದ ಮುನ್ನ ಕೊಟ್ಟ ನೀ ಕೊನೆಯ ಮುತ್ತು
ಕಣ್ಣಾಲಿಗೆ ತುಂಬಾ ಕಣ್ಣೀರು ತಂತು
ಇದು ಪ್ರಣಯ ಸಂಚಿಕೆಯ ಪೂರ್ಣ ವಿರಾಮವೇ?
ಅಥವಾ ಇದು ಕ್ಷಣಿಕ ವಿರಹಕ್ಕೆ ಅಲ್ಪ ವಿರಾಮವೇ?

ವಿರಹದ ಅನಿವಾರ್ಯ ಅರಿವಿದ್ರು ಅಳುತ  ನೀಡಿದೆ ಬಿಸಿಯಪ್ಪುಗೆ
ಕಣ್ಣೀರು ಒಣಗದೆ ಕಲೆಯಾಗಿ ಉಳಿಯಲಿ ನನ್ನೆದೆಯ ಮೇಲೆ
ಮತ್ತೆ ಭೇಟಿಯ ಮಾತು ಕೊಟ್ರು ಮನವೆಲ್ಲಾ ರಣರಂಗ
ನಿನ್ನ ಹಸನ್ಮುಖದ ಮುಗ್ಧ ಕೋಪವನು ಚುಂಬಿಸಿ ಪ್ರಶ್ನಿಸಲೇ ?

ಉದ್ದನೆಯ ತಲೆಗೂದಲೊಂದು ನನ್ನ ಜೇಬಿಗೆ ಸಿಕ್ಕು ಜೋಕಲಿಯಾಡುತಿದೆ
ನೀನಾಡಿದ ಪ್ರೀತಿಯ ಮಾತುಗಳು ಸಾಲಾಗಿ ನಿಂತು ಅಣಕಿಸುತಿವೆ...ಪ್ರಶ್ನಿಸುತಿವೆ...
ಅವು ಕಾಣದಿರಲೆಂದು ದೀಪವಾರಿಸಿರುವೆ...
ಮೆಲ್ಲಗೆ ನೀ ತಲೆ ಸವರಿದ ಅನುಭವ, ಮನಸೆಲ್ಲಾ ಉದ್ಗಾರ ಭಾವ...!

ಹಳೆಯ ಪ್ರೇಮದ ಕೊಂಬೆಗೆ ಹೊಸ ಚಿಗಿತದ ಸಂಭ್ರಮವೋ
ಪ್ರಥಮ ಪ್ರೇಮದ ಅನುಭವಕ್ಕೆ ಪ್ರಥಮ ಚುಂಬನದ ಸಿಂಚನವೋ
ಸರ್ವವೂ ಸಂಗೀತಮಯ, ಸರ್ವವೂ ಗೊಂದಲಮಯ
ಕತ್ತಲಲ್ಲೂ ನಿನ್ನ ನೆರಳಿನ ಸ್ಪರ್ಷ ಹಿತವಾಗಿದೆ...

ನೆನಪಾದೆ ನೀ... ಎಲ್ಲೋ ಕಗ್ಗತ್ತಲಲ್ಲಿ ಕಣ್ಣ ರೆಪ್ಪೆ ತೇವಗೊಂಡಿವೆ
ಅದಕೆ ತಲೆ ದಿಂಬು ನೀ ಸಾಕ್ಷಿಯಲ್ಲವೇ?

ಹಾಡೋಣ ಬಾ ಗಿಳಿಯೇ

ಭಾವವರಿಯದಾದೆಯಾ ಓ ಗಿಳಿಯೇ ?
ಭಾವ ಮನದೊಳುಕ್ಕಿಸಿ ಹಾರ ಹೊರಟೆ ಎಲ್ಲಿಗೆ ?
ಭಾವ ಶೃಂಗಾರವಾದಿತೆಂಬ ಭಯವೇ ?

ನಿನ್ನ ಹಾಡಿಗೆ ನನ್ನ ಮೈ ಮೇಲೆ
ಹೊಸ ರೆಕ್ಕೆ ಪುಕ್ಕಗಳ ಸಂಭ್ರಮ
ಉಸಿರು ನಿಲ್ಲುವ ಹಾಗೆ ನಿನ್ನ ಹೆಸರು ಹೇಳಲೇ ?
ನೀ ಹಾರದ ಹಾಗೆ  ಜೋರಾಗಿ ಉಸಿರೆಳೆದು  ನಿರ್ವಾತ ಸೃಷ್ಟಿಸಲೇ ?

ಹಿತವಾಗಿ ರೆಕ್ಕೆಯೊಂದಾಗಿಸಿ ನೆನೆಯಬಾರದೆ? ನೀ ಕುಣಿಯಬಾರದೆ?
ನನ್ನ ಒಂಟಿ ಗೂಡಿನ ಅತಿಥಿ ನೀ ಆಗಬಾರದೇ ?
ಚಳಿಗೆ ನಡಗುವ ಹಾಡುಗಳ ಸಾಲಿಗೆ ಒಣಗಿದ ಗೂಡಿನ ಕಸಕಡ್ಡಿಗಳು ಚಿಗುರಿವೆ
ಹಸಿವಾಗಿರಬಹುದು ಸಿಹಿ ಗೆಣಸು ಹೆಕ್ಕಿ ತಂದು ತಿನಿಸಲೇ ?

ಪಂಜರಗಳು ಕಾಯುತಿಹವು ಸೆರೆ ಹಿಡಿಯಲು ನಮ್ಮನು
ನನ್ನ ಕೊನೆಯ ಆಸೆ ನಿನ್ನ ಜೊತೆ ಒಂದೇ ಪಂಜರದ ವಾಸ
ಬಹುಷ: ಆವಾಗ್ಲಾದ್ರೂ  ನನ್ನ ಅನಿವಾರ್ಯತೆ ನಿನಗೆ ಅರ್ಥ ಆಗ್ಬಹುದು...!