Total Pageviews

Saturday 16 June 2012

ತನ್ನ ತೇರನ್ನು ತಾ ಎಳೆಯುತಾ…


ದಿನವಿಡೀ ಕಣ್ಣಾಮುಚ್ಚಾಲೆ ಆಟ
ಒಮ್ಮೆ ಬಿಸಿಲು ಒಮ್ಮೆ ನೆರಳು
ಸೂರ್ಯ ಮೂಗು ಮುಚ್ಚಿ ಮುಳುಗಿದ
ಕತ್ತಲನ್ನು ಒಂಟಿ ಮಾಡಿ...
ಚಂದ್ರನನ್ನು ಜಂಟಿ ಮಾಡಿ...

ಕತ್ತಲೆ ಹೆಪ್ಪುಗಟ್ಟಿದ ಕಗ್ಗತ್ತಲ ರಥ ಬೀದಿಯಲಿ
ತನ್ನ ತೇರನ್ನು ತಾ ಎಳೆಯುತಾ
ಬಂದ ಚಂದ್ರನು ಕತ್ತಲೆಯ ಕೈ ಜೋಡಿಸಲು
ಬೆಳಗಿದವು ಮುತ್ತೈದೆ ನಕ್ಷತ್ರಗಳು ಮಂಗಳಾರತಿ ಬೆಳದಿಂಗಳ ಜಾತ್ರೆಯಲಿ
ಮಿನುಗಿದವು ಉಳಿದೆಲ್ಲಾ ತಾರೆಗಳು
ತಾವೇ ಎಳೆದು ತಂದೆವೆಂಬ ಸಂಭ್ರಮದ ಭ್ರಮೆಯಲಿ...!

ಬೆಳದಿಂಗಳ ಸುಯ್ಯ- ಸುಯ್ಯ ತಂಗಾಳಿ
ಎಲ್ಲಿಂದಲೋ ತೇಲಿಬಂದ ಬಿಳಿ-ನಸುಗೆಂಪು ಮೋಡ
ಆವರಿಸಿತು ಚಂದ್ರನ, ಆಲಂಗಿಸಿತು ಚಂದ್ರನ
ಎಲ್ಲಿಂದಲೋ ಬಂದ ದೇವಕನ್ಯೆ ಮುಖದ ಮೇಲೆ ಸೆರಗು ಚೆಲ್ಲಿದ ಅನುಭವ
ಹುಣ್ಣಿಮೆಯ ದಿನ ಕರ್ತವ್ಯ ಲೋಪವಾಗಿ, ಗ್ರಹಣ ಹಿಡಿದ ಮಂಪರು....!

ಅವನೊಟ್ಟಿಗೆ(ಚಂದ್ರ),  ಕೆಳಗೆ ನಿಂತು ನೋಡಿದವರಿಗೂ ದಂತಭಗ್ನ....!

ಪ್ರಣಯದ ಭಾವ ಮೈ ನೆರೆದಾಗ


ಪ್ರಣಯದ ಮೋಜಿಗೆ ಛೇಡಿಸಿದರೆ
ಅದೆಂಥಾ ಮುನಿಸು ನಿನ್ನದು?
ಮುನಿಸು ಮರೆಸಲು ರಮಿಸಿದರೆ
ಜೋಕೆ ಎಂದಿತು ಮನವು ಅಪಾಯ ಹತ್ತಿರವಿದೆ ಎಂದು....

ಅಂದು ನಿನ್ನ ಕೆಣಕಿದ್ದರ ಫಲವೇ
ಇಂದು ನಾ ಮೈ ಮರೆತಿರುವೆ
ಎಂದೂ ಭೇಟಿಯಾಗದ ಭಾವನೆಗಳು
ಇಂದು ಕೆರಳಿ ನಿಂತಿವೆ

ನನ್ನ ಭಾವನೆಗಳು ನಿನ್ನೊಡಗೂಡಿ
ಸಂಭಾಷಣೆಯಾದವು ಅಂದು
ಅವೇ ಸಂಭಾಷಣೆ ಮೈ ನೆರೆದು
ಋತು ಕಾವ್ಯವಾಗಿದೆ ಇಂದು

ಭಾವಾವೇಶಕ್ಕೊಳಗಾಗಿ ಛೇಡಿಸಿದೆ
ಮೋಜು ಸಿಕ್ಕಿತು, ಮುನಿಸು ಉಚಿತವಾಗಿ...
ಭಾವ ಸಮುದ್ರದಲಿ ಮೈ ಮರೆತು ರಮಿಸಿದೆ
ಮುನಿಸು ಮುಳುಗಿತು ಸೂರ್ಯನೊಡಗೂಡಿ, ಪ್ರಣಯ ಸಿಕ್ಕಿತು ನಿನ್ನೊಡಗೂಡಿ...