Total Pageviews

Friday 15 July 2016

ಅಪೂರ್ಣ ಬಾಳು


ಓ ಅಪರಿಚಿತಳೆ ನೀನೆಲ್ಲಿಂದಲೋ
ಕೂಗಬಾರದೇ ನನ್ನ
ಓ ಅಪರಿಚಿತಳೆ
ನೀನೊಮ್ಮೆ ಕೂಗಬಾರದೇ ನನ್ನ
ನಾನಿಲ್ಲಿ ಕ್ಷುದ್ರನಾಗಿ-ಛಿದ್ರವಾಗಿ ಬದುಕುತಿರುವೆ
ನೀನೆಲ್ಲೋ ಬುದ್ಧನಾಗುವ ಪ್ರಯತ್ನದಲ್ಲಿರುವೆ...!


ರೋಜು ರೋಜು ಈ ರೇಷಿಮೆಯಂತ ತಂಗಾಳಿಯು
ಹೋಗು-ಬರುವಾಗಲೆಲ್ಲ ಹೇಳುತಿದೆ-ಕೇಳುತಿದೆ ನಿನ್ನನು
“ಹಾಲು ಹೊಳುಪು-ಬಿಳುಪಿನ ಸುಂದರಿ
ಆ ಕೋಮಲ ಬಳ್ಳಿಯಂತಹ ಮದನಾರಿ
ಹಾ...ಎಲ್ಲಿರುವಳು ಅವಳು ?
ಸೂರ್ಯ ರಶ್ಮಿಯ ಬೆಳಕಿನವಳು...ಬಳುಕಿನವಳು
ನಿನ್ನ ಜೀವಕೆ ಜೀವದಂತಿರುವವಳು”
ನಾ ಅಪೂರ್ಣ... ನೀ ಅಪೂರ್ಣ
ಇನ್ನೂ ಸಾಗಿದೆ ಜೀವನ...


ಸುತ್ತ ನಿನ್ನ ಸುಳಿದಾಟವಿಲ್ಲವಾದರೂ
ನೀನೊಮ್ಮೆ ಬೀರಿದ ನಗು ಅಲೆಅಲೆಯಾಗಿ ಅಪ್ಪಳಿಸುತಿದೆ
ನನ್ನ ಮನದ ಕಡಲಿಗೆ...
ಸುತ್ತ ನಿನ್ನ ಮೊಗವೆಲ್ಲೂ ಕಾಣದಾದರೂ
ನಿನ್ನ  ಹುಡುಗಾಟ-ಚೆಲ್ಲಾಟಗಳ ಸಂಚಲನ ಮೂಡುತಿದೆ
ನೀನಿರುವ ಕುರುಹು ಎಲ್ಲಿದೆಯೋ
ಅದೇ ನನ್ನ ಪ್ರಪಂಚವು
ಎಲ್ಲಿರುವೆಯೋ...ನಿನೇಲ್ಲಿರುವೆಯೋ?
ನಾ ಅಪೂರ್ಣ...ನೀ ಅಪೂರ್ಣ 
ಇನ್ನೂ ಸಾಗಿದೆ ಜೀವನ...

 ಓ ಅಪರಿಚಿತಳೆ ಕೂಗಬಾರದೇ ನೀನೊಮ್ಮೆ...ಎಲ್ಲಿಂದಲೋ ಒಮ್ಮೆ...! 

ಸಮೃದ್ಧಿಯ ನಡೆ



ಪುಟ್ಟ ತೋಳುಗಳನಗಲಿಸಿ
‘ಅಮ್ಮ’ ಎನುತ ನೀ ಭುವಿಗಿಳಿದಾಗ
ನೀಡಿದೆ ಜನ್ಮ ಅಪ್ಪನಿಗೆ

ನಿನ್ನ ಉದಯ ಕಿರಣಗಳ ತಬ್ಬಿಕೊಳ್ಳದಿರಲು
ನನ್ನ ಅನುಪಸ್ಥಿತಿಗೆ ಕಾರಣ ಹಲವು
ಅಮ್ಮ ನಿನ್ನ ಬಾಚಿಕೊಂಡರೂ
ನನ್ನ ತೊಳುಗಳನು ನೀಡದ ವಿಷಾದ

ನಿನ್ನ ಮೊದಲ ಬಾರಿ ನಾ ಎತ್ತಿಕೊಳ್ಳಲು
ನನ್ನ ಸಂತೋಷಕೆ ಎಲ್ಲೆಯೇ ಇರಲಿಲ್ಲ
ಆದ್ರೂ, ಒಂದು ಕ್ಷಣ ನೀ ಗಂಡಾಗಲಿಲ್ಲವೆಕೆ
ಎನಿಸಿದ್ದು ಸುಳ್ಳಲ್ಲ...!
ಕ್ಷಮೆಯಿರಲಿ ಸಮ್ಮು L

ನಿನ್ನ ಪುಟ್ಟ ಕೈ, ನಿನ್ನ ಪುಟ್ಟ ಬಾಯಿ
ನಿನ್ನ ಅಮ್ಮನಂತೆ...
ನಿನ್ನ ಬೀರು ನೋಟ, ನಿನ್ನ ಕಿರು ಮೂಗು
ನಿನ್ನ ಹಾಲು ನಗೆ, ನಿನ್ನ ಪುಟ್ಟ ಕಾಲು
ನನ್ನದೇ ಪಡಿಯಚ್ಚು...
ಪಟ್ಟ ಖುಷಿಯಂತೂ ಅಷ್ಟಿಷ್ಟಲ್ಲ...
ನಿನ್ನ ಅಸಹಜ ಹೃದಯ ಮಿಡಿತವೊಂದೆ
ಎಷ್ಟೋ ದಿನ ಈ ಖುಷಿಗೆ ಅಪವಾದ...!
ಕಣ್ಣೀರಿಟ್ಟ ಕ್ಷಣವೆಲ್ಲ ಹೃದಯ ಹಿಂಡಿದ ಅನುಭವ

ನೀನಂದ ಮೊದಲ ಶಬ್ದವೇ ‘ಅಪ್ಪ’
ಖುಷಿಗೆ ನನಗೆ ನಾ ಜೈಕಾರ ಹಾಕಿಕೊಂಡಿದ್ದು ಸುಳ್ಳಲ್ಲ
ನಿನ್ನ ಪುಟ್ಟ ಹೆಜ್ಜೆ ನೋಡಿದ ಕ್ಷಣ
ಮೈಯೆಲ್ಲಾ ರೋಮಾಂಚನ
ಓಡಾಡಿ ಸುಸ್ತಾಗಿ ನನ್ನೆದೆಯ ಮೇಲೆ ಮಲಗಲು ನೀ
ಮೈ-ಮನದ ದಣಿವು ಆರಿದ ವಿಶೇಷ ಅನುಭವ

ನನ್ನ ಕನಸುಗಳಿಗೆ ಶ್ರೀಕಾರ
ಬರೆದಿರುವೆ ನೀ...
ನನ್ನ ದಿವಂಗತ ಅಜ್ಜಿಯ ಸ್ವರೂಪಿ ನೀ...
‘ಸಮೃದ್ಧಿ’ ಗೊಳಿಸು ನಮ್ಮನು
ಅಜ್ಜಿಯ ಶಾಂತರೂಪತೆಯ ಪ್ರತಿಬಿಂಬ ನೀ
ಸಾಕಾರಗೊಳಿಸು ನಮ್ಮ ಬಾಳನು
ನಿನ್ನ ಪ್ರೀತಿ ತುಂಬಿದ ನಡೆಯಿಂದ...