Total Pageviews

Saturday 16 June 2012

ತನ್ನ ತೇರನ್ನು ತಾ ಎಳೆಯುತಾ…


ದಿನವಿಡೀ ಕಣ್ಣಾಮುಚ್ಚಾಲೆ ಆಟ
ಒಮ್ಮೆ ಬಿಸಿಲು ಒಮ್ಮೆ ನೆರಳು
ಸೂರ್ಯ ಮೂಗು ಮುಚ್ಚಿ ಮುಳುಗಿದ
ಕತ್ತಲನ್ನು ಒಂಟಿ ಮಾಡಿ...
ಚಂದ್ರನನ್ನು ಜಂಟಿ ಮಾಡಿ...

ಕತ್ತಲೆ ಹೆಪ್ಪುಗಟ್ಟಿದ ಕಗ್ಗತ್ತಲ ರಥ ಬೀದಿಯಲಿ
ತನ್ನ ತೇರನ್ನು ತಾ ಎಳೆಯುತಾ
ಬಂದ ಚಂದ್ರನು ಕತ್ತಲೆಯ ಕೈ ಜೋಡಿಸಲು
ಬೆಳಗಿದವು ಮುತ್ತೈದೆ ನಕ್ಷತ್ರಗಳು ಮಂಗಳಾರತಿ ಬೆಳದಿಂಗಳ ಜಾತ್ರೆಯಲಿ
ಮಿನುಗಿದವು ಉಳಿದೆಲ್ಲಾ ತಾರೆಗಳು
ತಾವೇ ಎಳೆದು ತಂದೆವೆಂಬ ಸಂಭ್ರಮದ ಭ್ರಮೆಯಲಿ...!

ಬೆಳದಿಂಗಳ ಸುಯ್ಯ- ಸುಯ್ಯ ತಂಗಾಳಿ
ಎಲ್ಲಿಂದಲೋ ತೇಲಿಬಂದ ಬಿಳಿ-ನಸುಗೆಂಪು ಮೋಡ
ಆವರಿಸಿತು ಚಂದ್ರನ, ಆಲಂಗಿಸಿತು ಚಂದ್ರನ
ಎಲ್ಲಿಂದಲೋ ಬಂದ ದೇವಕನ್ಯೆ ಮುಖದ ಮೇಲೆ ಸೆರಗು ಚೆಲ್ಲಿದ ಅನುಭವ
ಹುಣ್ಣಿಮೆಯ ದಿನ ಕರ್ತವ್ಯ ಲೋಪವಾಗಿ, ಗ್ರಹಣ ಹಿಡಿದ ಮಂಪರು....!

ಅವನೊಟ್ಟಿಗೆ(ಚಂದ್ರ),  ಕೆಳಗೆ ನಿಂತು ನೋಡಿದವರಿಗೂ ದಂತಭಗ್ನ....!

ಪ್ರಣಯದ ಭಾವ ಮೈ ನೆರೆದಾಗ


ಪ್ರಣಯದ ಮೋಜಿಗೆ ಛೇಡಿಸಿದರೆ
ಅದೆಂಥಾ ಮುನಿಸು ನಿನ್ನದು?
ಮುನಿಸು ಮರೆಸಲು ರಮಿಸಿದರೆ
ಜೋಕೆ ಎಂದಿತು ಮನವು ಅಪಾಯ ಹತ್ತಿರವಿದೆ ಎಂದು....

ಅಂದು ನಿನ್ನ ಕೆಣಕಿದ್ದರ ಫಲವೇ
ಇಂದು ನಾ ಮೈ ಮರೆತಿರುವೆ
ಎಂದೂ ಭೇಟಿಯಾಗದ ಭಾವನೆಗಳು
ಇಂದು ಕೆರಳಿ ನಿಂತಿವೆ

ನನ್ನ ಭಾವನೆಗಳು ನಿನ್ನೊಡಗೂಡಿ
ಸಂಭಾಷಣೆಯಾದವು ಅಂದು
ಅವೇ ಸಂಭಾಷಣೆ ಮೈ ನೆರೆದು
ಋತು ಕಾವ್ಯವಾಗಿದೆ ಇಂದು

ಭಾವಾವೇಶಕ್ಕೊಳಗಾಗಿ ಛೇಡಿಸಿದೆ
ಮೋಜು ಸಿಕ್ಕಿತು, ಮುನಿಸು ಉಚಿತವಾಗಿ...
ಭಾವ ಸಮುದ್ರದಲಿ ಮೈ ಮರೆತು ರಮಿಸಿದೆ
ಮುನಿಸು ಮುಳುಗಿತು ಸೂರ್ಯನೊಡಗೂಡಿ, ಪ್ರಣಯ ಸಿಕ್ಕಿತು ನಿನ್ನೊಡಗೂಡಿ...  

Tuesday 15 May 2012

ಅವಳದೇ ಗುಂಗು ಪ್ರತಿಕಣದಲ್ಲೂ…


ಹುಲ್ಲಿನೆಸಳಿನ ಇಬ್ಬನಿಯಂತೆ ಕಂಡಾಗಿನಿಂದಲೂ ನೀ ಕಂಡಾಗಿನಿಂದಲೂ
ನಿನ್ನದೆ ಬಿಂಬ ನನ್ನ ಮನದ ತುಂಬ
ನಿನ್ನ ಕುಡಿ ನೋಟವೇ ನನ್ನ ಕಣ್ಣ ತುಂಬ,
ನೀ ದಾಟಿ ಹೋದ ಹಾದಿಲಿ ಈಗ ಹೂ ಬಳ್ಳಿಗಳ ಮುಷ್ಕರ...!
ಮತ್ತೆ ನೀ ಬಾರದಿರಲು ನಿನ್ನ ಹೆಸರಿನ ಬಹಿಷ್ಕಾರ, ನಿನ್ನ ಹೆಸರಿನ ಬಹಿಷ್ಕಾರ...
ನಿನ್ನ ಗುಂಜನದ ಪ್ರತಿದ್ವನಿಯಲ್ಲಿ ಹಕ್ಕಿಗಳ ಕಲರವ ಮಂಕು-ಮಂಕು,
ನಿನ್ನದೇ ಹೆಸರಿನ ಜಪದಲ್ಲಿ ಆ ‘ಸೂರ್ಯ’ನ ಕಾಂತಿಯೂ ಮಂಕು-ಮಂಕು ಮಂಕು-ಮಂಕು...

ಕೈ ಬೀಸಿ ನೀ ನನ್ನ ಕರೆದಾಗಿನಿಂದಲೂ ನೀ ಕರೆದಾಗಿನಿಂದಲೂ
ನನ್ನ ಭಾವನೆಗಳಿಗೆ ಭಾಷೆಯು ಬಾರದೆ,
ನನ್ನ ಪಂಚೆಂದ್ರಿಯಗಳನ್ನೆಲ್ಲ ಆವರಿಸಿರುವೆ,
ಅದಕೆ ‘ನಾನು’ ಎಂಬ ಸಾಮ್ರಾಜ್ಯಕ್ಕೆ ‘ನೀನು’ ಎಂಬ ಕಿಚ್ಚನ್ನು ಹಚ್ಚು ಬಾ ಈಗಲೇ,
ಪಂಚೆಂದ್ರಿಯಗಳ ಸಮ್ಮೇಳನ ನಡೆಸೋಣ ಬಾ ನಾವಿಗಲೇ,
ನನ್ನ ಕಿರು ಬೆರಳಿಗೆ ನಿನ್ನ ಕಿರು ಬೆರಳ ಬೆಸುಗೆ
ಬೆಸೆಯೋಣ ಬಾ ನಾವಿಗಲೇ
ಬೆಸೆಯೋಣ ಬಾ ನಾವಿಗಲೇ
ಬೆಸೆಯೋಣ ಬಾ ನಾವಿಗಲೇ....

ಶ್ರಮಿಕ ಸೂರ್ಯ


ಒಮ್ಮೆ ಮೂಡಣದಿ ಹಕ್ಕಿಗಳ ಸ್ವಾಗತ
ಇನ್ನೊಮ್ಮೆ ಪಡುವಣದಿ, ಗೂಡು ಸೇರುವ ಸಂತಸದಿ ವಂದನಾರ್ಪಣೆಯ ಭಾಷಣ
ಯುಗಯುಗಗಳಿಂದ ಸಾಗಿದೆ ನಿನ್ನ ನಿರಂತರ ಓಡಾಟ
ಸಕಲ ಜೀವರಾಶಿಗಳೋಡನೆ ಮತ್ತೆ ನಿನ್ನ ಒಡನಾಟ


ಕಿರಣಗಳ ಕೈ ಚಾಚಿ ಸಾಲ ನೀಡಿರುವೆ ಗಿಡ-ಮರ ಹೂ ಬಳ್ಳಿಗಳಿಗೆ
ಬೆಳಗಿನ ಜಾವದ ನಿದ್ದೆಗಣ್ಣಲ್ಲಿ
ನಿನ್ನ ಮದ್ಯಾಹ್ನದ ಉತ್ಸಾಹದಲ್ಲಿ...
ಒಮ್ಮೆ ಮೂಡಣದ ಮೋಡದ ಸೆರಗಿನ ಮುಂದೆ 
ಒಮ್ಮೆ ಪಡುವಣದಿ ಮೋಡದ ಸೆರಗಿನ ಹಿಂದೆ....


ನಾಳೆ ಸಿಗುವ ಭಾಷೆ ಕೊಟ್ಟು
ಮತ್ತೆ ದುಡಿವ ಪಣವ ತೊಟ್ಟು
ನಿನ್ನೆ ಭಾಷೆ ಕೊಟ್ಟು ಬಂದ ನಾಡಿನೆಡೆಗೆ ನೋಟ ನೆಟ್ಟು
ಕಡಲಾಚೆ ಬಾನದಿ, ಕಡು ನೀಲಿ ಬಾನದಿ
ಅದೋ ಮುಳುಗುತಿಹ ‘ಕೆಂಪು ಚಂದಿರ’
ಮತ್ತೆ ಬರುವ ಸಂಭ್ರಮದಿ
ಮತ್ತೆ ಬರುವ ಸಂಭ್ರಮದಿ....


*ಕೆಂಪು ಚಂದಿರ= ಸೂರ್ಯ