Total Pageviews

Monday 21 November 2016

ನಿನ್ನ ಪ್ರೀತಿಗಾಗಿ

ಪ್ರತಿ ದಿನವೂ ಪ್ರತಿ ಕ್ಷಣವೂ
ನಿನ್ನದೇ ಧ್ಯಾನ...
ನನ್ನೊಳಿರುವ ಮೌನವು ನೀನು
ನನ್ನೊಳಿರುವ ಗೊಂದಲವೂ ನೀನು
ಪ್ರತಿ ಮೌನದಲ್ಲೂ ನಿನ್ನದೇ ಗೊಂದಲ
ಪ್ರತಿ ಗೊಂದಲದಲ್ಲೂ ನಿನ್ನ ಮೌನದ್ದೇ ಕೂಗು

ನಿನ್ನಲಿ ಹೇಳಲಾರದ ಸಂಕಟ ಹಲವು
ನಿನ್ನಲಿ ಹೇಳಿದರೂ ತೀರದ ಭಾವನೆಗಳು
ನನ್ನ ಪ್ರೀತಿ ಸಾಮ್ರಾಜ್ಯಕೆ ನಿನ್ನದೇ ಸಾರ್ವಭೌಮತೆ
ಬಿಟ್ಟುಕೊಡದೆ ಬಿಗಿಗೊಳಿಸು...
ನನ್ನ ಜಗವೆಲ್ಲ ಈಗ ನಿನ್ನ ಹಿಡಿತಕೆ ಸಿಲುಕಿದೆ

ನಿನ್ನೊಡನಿರದ ನನ್ನ ಜೀವನ
ಪ್ರತಿ ಕ್ಷಣವೂ ಪಶ್ಚಾತಾಪ...
ಇರಬೇಕು ನಾನು ಮಾತ್ರವೇ ನಿನ್ನೆಲ್ಲ ಕ್ಷಣದಲೂ
ನನ್ನ ಹಣೆಗೆ ನಿನ್ನ ಅದರ ಚುಂಬನದ ನಿರೀಕ್ಷೆಯು
ನಿನ್ನ ನಾಜೂಕು ತೋಳುಗಳನು
ತೆಕ್ಕೆ ಸಡಲಿಸದೆ ತಬ್ಬಿಕೊಳ್ಳುವ ಕಾತುರ...
ಇದೆಂಥ ಅಸಹನೆಯ ಭಾವ ನನ್ನಲಿ
ಕಣ್ಣ ರೆಪ್ಪೆಗಳಿಗೆ ಮುಂಗಾರಿನ ಸಿಂಚನ...

Thursday 13 October 2016

ಪ್ರೀತಿಯ ಸೋಂಕಿನಲ್ಲಿ

ಪ್ರೀತಿಯ ಸೋಂಕು ತಾಗಿ ನಿನ್ನ ನೆನಪಾದಾಗ
ತಬ್ಬಿಕೊಳ್ಳಲು ನೀನಿಲ್ಲದೆ ಜೊತೆಗೆ...
ನಿನ್ನ ನೆನಪಿನ ಕಣ್ಣೀರು ಧುಮುಕಿ
ಕನ್ನಡಕವನು ಆಲಂಗಿಸಲು
ಬಿಕ್ಕಿ ಬಿಕ್ಕಿ ಅತ್ತು ಕಲೆಯಾಗಿದೆ
ಪ್ರೀತಿಯಲಿ ಈಗ ಕಣ್ಣು – ಕನ್ನಡಕ ಮಂಜು ಮಂಜು..

ಕಣ್ಣೀರ ಧಾರೆಯು ಕೆನ್ನೆಯ ಬಳಸಿ
ಕಿವಿಗೆ ಸೇರಲು ಸಾಂತ್ವಾನದ ಕೂಟ
ಕಣ್ಣೀರ ಪಯಣ ಮುಂದೆ ಸಾಗಿ
ತಲೆದಿಂಬಿನಲ್ಲಿ ಸಂಗಮ...
ಕನ್ನಡಕ-ತಲೆದಿಂಬಿನ ಮೇಲೆ ಕಣ್ಣೀರ ಕಲೆಗಳ ಚಿತ್ತಾರ
ಕಣ್ಣೀರ ಕಲೆಗಳ ಸಂಘಟನೆಯ ಮುಷ್ಕರ
ನೀನಿರುವೆಡೆ ನಾ ಬೇಗ ಸಾಗಲೆಂದು
ತಾಳ್ಮೆ ಕಳೆದು ಮತ್ತೆ ಕಣ್ಣಿನ ಹಿಂಸಾಚಾರ ...!

ನಿನ್ನ ಪ್ರೀತಿ ಮಾಡಲು
ನಿನ್ನ ಪ್ರೀತಿಯ ಪಡೆಯಲು
ಮನವು ಇಂದು ರಣರಂಗ
ನಾನಾ ಬಗೆಯ ಭಾವನೆಗಳಿಗೆ ಸೆರೆ ಸಿಕ್ಕ
ಹೊಡೆತಕೆ ಮನವಿಂದು ಚಡಪಡಿಸಿದೆ...
ಸೇರುವೆ ನಿನ್ನನು ಕೂಡಲೇ
ಕಣ್ಣಿಗೆ ಸಾಂತ್ವಾನ ನೀಡಿ ಪ್ರೀತಿಸುವೆಯಾ ?
ಆನಂದ ಭಾಷ್ಪಕೆ ಸಹಕರಿಸುವೆಯಾ ?

ಪ್ರೇಮ ಮಂಥನ

ಇಂದು ನನ್ನ ತಿರಸ್ಕರಿಸಿದೆ
ನಿನ್ನ ಮನದಲಿ ಅವನನು ತುಂಬಿದ ತಪ್ಪಿಗೆ
ನನ್ನ ನೀ ಪ್ರೀತಿಸಿಯೇ ಇಲ್ಲವೇ ?
ನಿಮ್ಮ ಸಲಿಗೆ ಮೂಡಿಸಿದೆ ಇಂದು ಅಸೂಹೆ

ಅವನ ಮೇಲಿನ ಕೋಪಕೆ ನೀ
ನನ್ನ ಪ್ರೀತಿಸಿದ್ದು ಸಹಜವೇ ?
ನನ್ನ ಹುಚ್ಚು ಪ್ರೀತಿ ಇಂದು ಸುಳ್ಳಾಯಿತೇ ?
ನನ್ನ ಪ್ರೀತಿ ನೀ ಕಂಡ ಮಾಯಾ ಜಿಂಕೆಯಾಯಿತೇ ?
ನಂಬಿದ ದೇವರ ಪ್ರೀತಿ ಪ್ರಸಾದ ಕರಗಿ ಹೋಯಿತೇ?

ನಿನ್ನನು ಬಿಟ್ಟುಕೊಡದ ಭಾವನೆ
ಕೋಪಕೆ ಇಂದು ರೂಪಾಂತರ...
ನಿಮ್ಮ ಸ್ನೇಹ ಸಲಿಗೆಯು ಕಲುಕಿದೆ
ನಮ್ಮ ನಡುವಿನ ಪ್ರೇಮಾಂಕುರ...
ನಮ್ಮ ನಡುವಿನ ಪ್ರೇಮ ಮಂಥನದಲಿ
ಅವನ ಮೇಲಿರುವ ನಿನ್ನ ಮೋಹ ಬಹಿರಂಗ !
  
ನಿನ್ನ ಮೋಹದ ಕಾರಣಕಿಂದು ನಮ್ಮ ಪ್ರೀತಿಯ ಬಲಿಪಶು
ಏನೇ ಆಗಲಿ ನಿಲ್ಲಲಾರದು ನನ್ನ ಪ್ರೀತಿಯ ಕಾರಂಜಿಯು
ಎಲ್ಲೋ ಮನದ ಮೂಲೆಯಲಿ
ನಿನ್ನೋಲವಿಗಾಗಿ ಹೊತ್ತಿದೆ ಭರವಸೆಯ ಬೆಂಕಿ !
ಇಂದು ನಮ್ಮ ಸಂಬಂಧವು ಪ್ರೀತಿಯೋ, ಬರೀ ಸ್ನೇಹವೋ
ತಿಳಿಯದಾದೆನು, ನಾ ತಿಳಿಯದಾದೆನು...

ನಿನ್ನಗಲಿ ನಾನಿರಲಾರೆ

ಹೇಳಿಬಿಡು ಓ ಒಲವೇ
ನೀ ಸುಮ್ಮನೇಕೆ ಕೊಲ್ಲುವೆ
ನಿನ್ನ ಮನದಾಳದ ಮಾತನು...
ಈ ಮೌನವ ನಾ ಸಹಿಸೆನು
ಅಭ್ಯಾಸವಾಗಿ ಹೋಗಿರುವೆ ನೀ
ಚೂರು ಮರೆಯಾದರೂ ನಾ ತಾಳೆನು

ನನ್ನುಸಿರಿಗಿಂತ ಹತ್ತಿರ ನೀ
ಬಲ್ಲೆಯಾ ಈ ಮಾತನು
ನಾನುಸಿರು ಬಿಟ್ಟರೂ ನೀನು ನನ್ನಲ್ಲೇ
ಉಸಿರು ತುಂಬಿ ಉಳಿಸು ಬಾ ನನ್ನನು

ನೆರಳಿಗಿಂತ ಹತ್ತಿರ ನೀನು
ಹಿಂಬಾಲಿಸುವೆಯಾ ನನ್ನನು ?
ಅತಿಯಾಗಿ ಪ್ರೀತಿಸುವೆ
ಮರೆಯದೆ ಸ್ವಲ್ಪ ಪ್ರೀತಿಸುವೆಯಾ ನನ್ನನು ?
ಚೂರು ಸಹಿಸುವೆಯಾ ನನ್ನನು ?
  
ಮನದ ಭಾವನೆಗಳು ಬಿಕ್ಕಿ ಬಿಕ್ಕಿ
ಅಳುತಿವೆ ಸಂತೈಸುವೆಯಾ ನನ್ನನು ?
ನಿನ್ನಗಲಿ ನಾನಿರಲಾರೆ
ನೀನಿಲ್ಲದೆ ನಾನಿರಲಾರೆ
ಕಣ್ಣೀರಿಗೆ ಪೂರ್ಣ ವಿರಾಮ ನೀನಾಗುವೆಯಾ?

ಹೇಳಿಬಿಡು ಓ ಒಲವೇ
ಸುಮ್ಮನೇಕೆ ನಿಂತಿರುವೆ... 

ನೀ ನನ್ನ ಸಹಾನುಭೂತಿ

ಏಕೆ ಈ ಎರಡು ಕ್ಷಣದ ಜೀವನವು
ಪ್ರೀತಿಗೆ ಯುಗಗಳು ಸಾಲದು
ಕೇಳಿ ಬಿಡುವೆ ಆ ದೇವರನು
ಮತ್ತೆ ಸಮಯವನು ಹೊಸದಾಗಿ
ಬೇರೆಲ್ಲೂ ಹೋಗದೆ ಕೇವಲ ನಿನ್ನಲಿರಲು
ನಿನ್ನ ಜೊತೆಯಿರಲು...
ಪ್ರೀತಿಯ ನೋವು ನಿನಗೆ ಹಂಚಲು
ಪ್ರತಿ ನೋವು ಎಷ್ಟು ಸುಂದರ
ನಿನಗೆ ನೋವು ಹಂಚಲು
ನನಗೆ ನೀನೆ ಸಹಾನುಭೂತಿ...

ನೂರಾನೆಯ ಬಲ ನನಗೆ ನಿನ್ನ ಹಸನ್ಮುಖವು
ನಿನ್ನ ನಗು ಮುಖವೇ ನನ್ನ ಆಶಾ ಕಿರಣವು
ಜಗದ ಅವಕೃಪೆಗೆ ನಿನ್ನ ನಗುವೆ ಶ್ರೀರಕ್ಷೆ
ಜೀವನ ಈಗ ಮನಮೊಹಕವು
ನನ್ನೆದುರು ನೀನಿರಲು...
ನಿನ್ನ ಹೊರತು ಸ್ವರ್ಗ ಇನ್ನೆಲ್ಲಿ ?
ಸ್ವರ್ಗವು ಧರೆಗುರುಳಿ, ಸ್ವರ್ಗವು ನಿಸರ್ಗಕ್ಕೆ ಶರಣಾದಂತೆ !
ಪ್ರೀತಿಯ ನೋವು ನಿನಗೆ ಹಂಚಲು
ಪ್ರತಿ ನೋವು ಎಷ್ಟು ಸುಂದರ
ನಿನಗೆ ನೋವು ಹಂಚಲು
ನನಗೆ ನೀನೆ ಸಹಾನುಭೂತಿ...

ನಿನ್ನ ಹೃದಯ ಬಡಿತ ಈಗ ನನ್ನ ಜೀವವು
ನಿನ್ನ ಮನದ ಬಯಕೆ ಈಗ ನನ್ನ ಆರಾಧನೆಯು
ಇದೆಂಥ ವಿಶೇಷ ಸಂಬಂಧವು...
ಇದೆಂಥ ಅಪೂರ್ವ ಅನುಬಂಧವು...
ನಿನ್ನ-ನನ್ನ ಜೀವವೀಗ ಇಂದು ಒಂದಾಗಿದೆ
ಮರಳುವೆ ನಾ ನಿನ್ನೆಡೆಗೆ
ಎಲ್ಲೇ ಜೀವ ಹೋದರೂ...ಎಲ್ಲೇ ಜೀವ ಹೋದರು...
ಪ್ರೀತಿಯ ನೋವು ನಿನಗೆ ಹಂಚಲು
ಪ್ರತಿ ನೋವು ಎಷ್ಟು ಸುಂದರ
ನಿನಗೆ ನೋವು ಹಂಚಲು
ನನಗೆ ನೀನೆ ಸಹಾನುಭೂತಿ...

ನೀ ಹೆಜ್ಜೆಯಿಡಲು ಜೀವನದಲಿ
ನನ್ನ ಭಾವನೆಗಳಿಗೆ ಹೊಸ ದಿಕ್ಕು
ನನ್ನ ಆತ್ಮ ಸಾಕ್ಷಿಯ ಸ್ಥಾನ ನೀ ಅಲಂಕರಿಸಿರುವೆ
ನಿನ್ನ ಗುಂಗಿನಲಿ ಮುಳುಗಿರುವೆ
ನಿನ್ನದೇ ಪ್ರೀತಿಯಲಿ ತೆಲುತಿರುವೆ
ನಿನ್ನ ಪ್ರೀತಿಯಲಿ ಸೋತಿರಲು
ಈ ಸೋಲೇ ಗೆಲುವಾಗಿದೆ
ನೀ ನನ್ನ ಅಹಂಕಾರವಾಗಿರುವೆ...
ಪ್ರೀತಿ ನೋವು ಹಂಚಲು
ನನಗೆ ನೀನೆ ಸಹಾನುಭೂತಿ... ನನಗೆ ನೀನೆ ಸಹಾನುಭೂತಿ...

ಪ್ರೀತಿಸಲೇ? ಇಲ್ಲವೇ ಮರೆತು ಬಿಡಲೇ?

ನೀನೆ ಹೇಳಬಾರದೆ ಇಂದು
ನಿನ್ನ ಪ್ರೀತಿಸಲೇ ಇಲ್ಲವೇ ಮರೆತು ಬಿಡಲೇ ?
ಕೊಡುವೆಯಾ ನಿನ್ನ ಮನದ ವಿಳಾಸವಿಂದು
ನಿನ್ನೆದುರು ಹೃದಯದ ಮೂಲೆ ಮೂಲೆ ದಹಿಸಿ ಬಿಡಲೇ ?

ಆಲಿಸುವೆಯಾ ನೀನು ನಾನಾಡದ ಮಾತನು
ಇಷ್ಟು ಹೇಳಿ ಮುಗಿಸಲೇ ?
ನನ್ನ ಪ್ರೀತಿಯ ಮೇಲೆ ಹಿಡಿತ ತಪ್ಪಿ
ಮನವು ಸೋತು ಅಳುತಿದೆ
ಆದರೂ ಮನವು ಬಯಸಿದೆ ನಿನ್ನ ಮನದ ಭೇಟಿಗೆ...
ಹೇಳಿ ಬಿಡು ನೀನಿಂದು
ಪ್ರೀತಿಸಲೇ ಇಲ್ಲವೇ ಮರೆತು ಬಿಡಲೇ ?

ಹಿಂದೆಂದೂ ಬಯಸದ ಭಾವನೆಗಳು ಅರಳಿವೆ
ಬೇರೆ ಯಾರ ಭೇಟಿಗೂ ಕಾಯದೆ
ನಿನ್ನ ಪ್ರೀತಿ ಭಾಷೆಗೆ ಮನವಿಂದು ಚಡಪಡಿಸಿದೆ
ಗೊಂದಲವನು ಬಗೆಹರಿಸಿ
ಮನದ ಕೀಲಿ ಕೊಡುವೆಯಾ?
ಹೇಳಿ ಬಿಡು ನೀನಿಂದು
ಪ್ರೀತಿಸಲೇ ಇಲ್ಲವೇ ಮರೆತು ಬಿಡಲೇ ?

ನನ್ನ ಪುಟ್ಟ ಪುಟ್ಟ ಕನಸುಗಳು
ಕನಸಿನಲ್ಲಿನ ಭಾವಗೀತೆ, ಗೀತೆಯಲ್ಲಿನ ಭಾವವು
ಭಾವದಲ್ಲಿನ ಜೀವವು, ಜೀವದಲ್ಲಿನ ಒಲವು,
ಒಲವಿನಲ್ಲಿನ ಪ್ರೀತಿಯು....
ನೀ ಭೇಟಿಯಾಗದ ಕನಸು ಕೂಡ ಬೇಡವಾಗಿದೆ ನನಗೆ ಇಂದು 
ಹೇಳಿ ಬಿಡು ನೀನಿಂದು
ಪ್ರೀತಿಸಲೇ ಇಲ್ಲವೇ ಮರೆತು ಬಿಡಲೇ ?

ಬಿಗಿದ ತುಟಿಗಳನು ಬಿಡಿಸಿರುವೆ ಕೇಳು
ನನ್ನ ಭರವಸೆಯು ನೀನು
ನನ್ನ ಏಕಾಂತದ ಕನಸು ನೀನು
ನನ್ನ ಮನಕೆ ಹೆಣೆದ ಬೆಚ್ಚನೆಯ
ಭಾವನೆಗಳ ಎಳೆ-ಎಳೆಯು ನೀನು
ನಿನ್ನ ಪ್ರೀತಿಯಲಿ ಮುಳುಗಿರುವೆ ನಾನು
ನೀನಿರುವ ಕನಸುಗಳಲಿ ಮಾತ್ರ ಜೀವಂತ ನಾನು
ಇನ್ನೆಂದೂ ಕೇಳೆನು ನಾ ನಿನಗೆ
ಪ್ರೀತಿಸಲೇ ಇಲ್ಲವೇ ಮರೆತು ಬಿಡಲೇ ?

ಪ್ರೇಮ ಕಸ್ತೂರಿ

ನಿನ್ನ ತೋಳುಗಳಲಿ ಬಂಧಿಯಾಗಲು
ಪ್ರತಿ ಸಂಜೆಯು ವಿನೂತನ
ನನ್ನ ಮನದ ತುಂಬೆಲ್ಲ ಬೀರಿದೆ
ನಿನ್ನ ಮನದ ಕಸ್ತೂರಿಯ ಪರಿಮಳ

ತಂಗಾಳಿಯ ಬೀಸಣಿಕೆಗೆ ನಿನ್ನ ಸೆರಗಿನ ಪರದಾಟ
ಮುಂಗುರುಳು ಮಳೆ ತರಿಸುವ ಕಾರ್ಮೋಡವು
ಪ್ರೇಮ ಸುಧೆಯು ಕಣ್ಣಂಚಿನಿಂದ ಸುರಿಯಲು
ಮನವು ಚಡಪಡಿಸುತಿದೆ ಈ ಅಮೃತ ಸವಿಯಲು
ನನ್ನ ತೋಳುಗಳಲಿ ಬಿಗಿದಪ್ಪಿಕೊಳ್ಳಲೇ?
ಪ್ರೀತಿಯ ಚುಂಬನ ನಿನಗೆ ನೀಡಲೇ?
ಯವ್ವನದ ಅದರ ಜೇನಿನ ರಸವು ತುಳುಕಿ ಪೋಲಾಗದಂತೆ !

ಸೌಂದರ್ಯ ಸಾಗರದ ಲಹರಿಯು ನಿನಗಾಗಿ
ಬೆಳ್ಳಿ ಮೋಡದ ಚೆಲುವು ನಿನಗಾಗಿ
ಪ್ರೇಮ ಪುಷ್ಪಗಳು ಅರಳುವ ಸಮಯ
ಇಂದು ಒಂದಾಗಿ ಅಳಿಸೋಣ ಬಾ ಈ ದೂರವನು
ಕಾಮನಬಿಲ್ಲಿನ ಬಣ್ಣವ ಕದ್ದು
ನಿನ್ನ ಹಣೆಯನು ಸಿಂಗರಿಸುವೆ ನಾ...

ನಿನ್ನ ತೋಳುಗಳಲಿ ಬಂಧಿಯಾಗಲು

ಪ್ರತಿ ಸಂಜೆಯು ವಿನೂತನ...

ಸಾವಿರ ಸಾರಿ ನೋಡಿದರೂ ನಿನ್ನ

ನೋಡಿದರೂ ನಿನ್ನ ಸಾವಿರ ಸಾರಿ
ಇದೆಂಥ ಅಸಹಜ ಭಾವ ನನ್ನಲಿ
ಸಂಭಾಳಿಸಿದರೂ ಅತಂತ್ರ ಈ ಹೃದಯ
ನಿನ್ನಲ್ಲಿದೆ ಏನೋ ಮಾತು ವಿಶೇಷ

ನಿನ್ನ ಆಣತಿ ಪಡೆದು ಇನ್ನು
ಈ ಉಸಿರಿನ ಸುಳಿದಾಟ
ಹುಡುಕಿದರೂ ನಾನೆಲ್ಲೂ ಸಿಗಲಾರೆನು
ಎಲ್ಲೆಡೆಯೂ ಬರೀ ನಿನ್ನದೇ ಛಾಯೆ

ಒಂದು ಕ್ಷಣದ ಅಗಲಿಕೆಯು ನಾ ಸಹಿಸೆನು
ವಿರಹ-ಆತಂಕಗಳು ಬೇರೆ ಮಾತು
ದೂರವಿದ್ದರೂ ಇನ್ನೂ ಹತ್ತಿರ ನಾವು
ಸನಿಹ-ಸಲ್ಲಾಪಗಳು ಬೇರೆ ಮಾತು

ನಿನ್ನ ತೋಳುಗಳ ಆಲಿಂಗನದಲಿ ನಾ
ಜಗವ ಮರೆತ ನೆಮ್ಮದಿ ನನಗೆ ಇನ್ನೆಲ್ಲಿ ?
ನಿನ್ನ ನಯನಗಳ ಒಲವಿನ ಆಮಂತ್ರಣ
ನಿನ್ನ ದಾರಿಬಿಟ್ಟು ಸಾಗಲಿ ಇನ್ನೆಲ್ಲಿ ?

ನೋಡಿದರೂ ನಿನ್ನ ಸಾವಿರ ಸಾರಿ
ಇದೆಂಥ ಅಸಹಜ ಭಾವ ನನ್ನಲಿ... 

ನೀನಿಲ್ಲದೆ ಹೇಗೆ ನಾ...

ನಿನ್ನಗಲಿ ನಾನಿರಲಾರೆ
ನೀನಿಲ್ಲದೆ ನಾನಿರಲಾರೆ
ನನ್ನ ಅಸ್ತಿತ್ವವೆಲ್ಲಿದೆ ನಿನ್ನ ಹೊರತು
ನಿನ್ನಗಲಿದರೆ ನಾ ನಿನ್ನಿಂದ
ನನ್ನಿಂದ ನಾನಗಲಿದಂತೆ...

ಕಾರಣ ಕೇವಲ ನೀನು...
ಈಗ ಕೇವಲ ನೀನು
ಜೀವ... ಜೀವನವೆಲ್ಲವು...
ನನ್ನಾತ್ಮ ಶಾಂತಿ...ನನ್ನ ನೋವು ನಲಿವುಗಳೆಲ್ಲವು...
ನನ್ನ ಪ್ರೀತಿಯೇಲ್ಲವು...ನೀನೆ ಬರೀ ನೀನೆ...

ನಮ್ಮಿಬ್ಬರದು ಇದೆಂಥ ಸಂಬಂಧವು
ಅರೆ ಘಳಿಗೆಯ ಅಗಲಿಕೆಯೂ ಅಸಹಜವು
ದಿನದಿನದ ಬದುಕು ನಿನಗಾಗಿ...
ದಿನದ ಸಮಯವೆಲ್ಲವು ನಿನಗಾಗಿ...
ನಿನ್ನ ಹೊರತು ನನ್ನಾವಘಳಿಗೆಯು ಇರಬಾರದು
ಪ್ರತಿ ಉಸಿರಲ್ಲೂ ನಿನ್ನ ಹೆಸರು ಬಿಟ್ಟು ಬೇರೆ ಬಾರದು

ನಿನಗಾಗಿ ಬದುಕುವೆ
ನಿನಗೆ ನನ್ನ ಅರ್ಪಿಸುವೆ
ನಿನ್ನ ಪ್ರೀತಿ ಮಾತ್ರ ನನ್ನ ಸಂಭಾಳಿಸಲಿ, ನನ್ನ ಕಾಯಲಿ...
ನನ್ನ ದುಃಖ ದುಮ್ಮಾನಗಳೆಲ್ಲವನು ಸೆಳೆದುಕೋ
ನಿನ್ನ ಜೊತೆ ನನ್ನ ಜೀವನ ವಿಧಿ ಲಿಖಿತವು...
ನಿನ್ನ ಪಡೆದು ನಾನಾದೆ ಪರಿಪೂರ್ಣವು...

ನಿನ್ನಗಲಿ ನಾನಿರಲಾರೆ, ನೀನಿಲ್ಲದೆ ನಾನಿರಲಾರೆ...  

ನೀನಿಲ್ಲದ ನಾನು...

ಎಂತಹುದೋ ಪ್ರೇಮ ಗಾಳಿ ನನ್ನಾವರಿಸಿಹುದು
ನಿನ್ನ ಮಾತುಗಳೆಲ್ಲ ಸಂಗೀತವಾಗಿಹುದು
ಏಕಾಂತ ಮೌನದಲಿ ಇದೆಂತ ನಿನ್ನ ಕನವರಿಕೆ
ನಿನ್ನಗಲಿಕೆ ಶೋಕ ಗೀತೆಯ ನೇರ ಪ್ರಸಾರ ಹೃದಯದಿಂದ ನಯನಗಳಿಗೆ...

ನಿನ್ನ ಹೊರತು ನನಗೇನು ತಿಳಿಯದು
ನನ್ನ ಮರೆತು ನೀ ಹೋಗದಿದ್ದರೆ ಸಾಕು
“ಬೇರೆ” ಭಾವಗಳಿಗೆ ಅವಕಾಶ ಬೇಡ
ನೀನಿಲ್ಲದ ಭಾವವಿಲ್ಲದೆ ನನ್ನೆದೆಯು ಸ್ಮಶಾನ ಮೌನ

ಮತ್ತೆ ನಿನ್ನೆದೆಯ ಗೂಡಿಗೆ ಮರಳುವ ಮಾತು ಕೊಟ್ಟು
ನಿನ್ನ ಬಿಟ್ಟು ಹೊರಟಿರುವೆ
ಮರಳಿ ಬಂದಾಗ ಅದೇ ಭಾವದ ಭೇಟಿಯ ನಿರೀಕ್ಷೆಯಲ್ಲಿ
ಚೂರು ಬದಲಾದರೂ ನಾನು ಜೀವಂತ ಶವ! 

Tuesday 20 September 2016

ಪ್ರೇಮ ರಸ

ನಿನ್ನ ನಗೆಗಡಲಿನಲ್ಲಿ ಮಿಂದು ಹೋದೆ ನಾನಿಂದು
ನಮ್ಮ ಪ್ರೀತಿಯ ಬಜಾರಿನಲ್ಲಿ...
ಎಲ್ಲೂ ಇಲ್ಲದ ಪ್ರೀತಿಯ ಕಂಡೆ
ನಿನ್ನ ತೀಕ್ಷ್ಣ ನೋಟದಲಿ ನಾನಿಂದು
ನಾ ಕಾಣೆಯಾದೆ ನಿನ್ನ ನಗೆಗಡಲಿನ ಸಂತೆಯಲ್ಲಿಂದು...

ಕಾಪಾಡುವೆ ನಿನ್ನ ನಗುವನು
ಬೇರೆ ಕಾವಲುಗಾರ ಬೇಕಿಲ್ಲ...!
ನನಗಾಗಿ...ನಮ್ಮ ಪ್ರೀತಿಗಾಗಿ...
ಇಷ್ಟಂತು ನಾ ಸ್ವಾರ್ಥಿಯಾಗದೆ ಬೇರೆ ದಿಕ್ಕಿಲ್ಲ...!
ನಾ ಖೈದಿಯಾದೆ ನಿನ್ನ ಪ್ರೇಮ ಪ್ರಪಂಚದಲ್ಲಿಂದು...


ನನ್ನ ಪ್ರೇಮಾಧ್ಯಯನದ ಹೊಸ ಅವತರಣಿಕೆ ನೀ
ನಿನ್ನ ಕೊರಳ ಮಾಲೆಯ ಗಟ್ಟಿ ಕೊಂಡಿ ನಾನು
ಪ್ರೀತಿಯ ಜೋಳಿಗೆ ಚಾಚಿರುವೆ
ನಿನ್ನ ಕೊರಳಿಗೆ ಜೋತು ಬೀಳಲೇ?
ನಿನ್ನ ಮುದ್ದಿಸಿ ಸೋತು ಬಿಡಲೇ?
  
ಕೆಂಪು ಗಲ್ಲದ ಮೇಲಿನ ಕಪ್ಪು ಚುಕ್ಕಿಯ ಪಲ್ಲಕ್ಕಿ
ಮುತ್ತಿಟ್ಟು ಚೂರು ಸಂತೈಸಲೇ?
ನಿನ್ನ ಕಿವಿಯ ಮೇಲೆ ನನ್ನ ಹೆಸರಿನ ಗುಂಜನ
ನಿನ್ನಲ್ಲೇ ಕಳೆದು ಹೋದರೆ ಹುಡುಕಿ ಕೊಡುವೆಯಾ ನನ್ನನು?
ಅಲ್ಲೇ, ಬಿಟ್ಟು ಬಿಡುವೆಯಾ ನನ್ನನು?

ನನ್ನ ಹೆಸರಿನ ಸಿಂಧುರವು
ನಿನ್ನ ಹಣೆಯ ಮೇಲೆ ಬಿಡಿಸಲು ನಾ
ಜೀವನವು ರಂಗದೋಕುಳಿ
ನಿನ್ನ ಒಂದು ಸ್ಪರ್ಷಕೆ ಕಾತುರದಿ ಕಾಯುತಿರಲು
ನೀ ಹರಿಸಿದೆ ಹಿಂದೆಂದೂ ಅರಿಯದ ಪ್ರೇಮ ಸುಧೆ
ನಾನು ಈಗ ಕೇವಲ ಮೂಕ ವಿಸ್ಮಿತ

ಹಗಲಿರುಳು ನಿನ್ನ ಮುಂಗುರಳ ನೆರಳಲಿ
ಮಲಗಿರಲು ನಾನು
ನೀ ಬರೀ ನನ್ನವಳೇ ಎಂಬ ಜಪ-ತಪದಿ
ನನಗೆ ಬೇರೆಯಾರೂ ಅನಿವಾರ್ಯವಾಗುವುದು ಬೇಡ
ನನ್ನ ಪ್ರೇಮ ಸಂಚಿಕೆಗೆ ನಿನ್ನ ರುಜುವಾತು ಸಾಕು
  
ನೀ ಹೀಗೆ ನಡೆದು ಬಂದ ಹೆಜ್ಜೆಯು
ನನ್ನೆದೆಯಲಿ ಯಾವತ್ತೂ ಜೀವಂತ
ಕಾಲಿಗೆ ಮುತ್ತಿಟ್ಟು ಕೃ‍‍‌‌ತಜ್ಞತೆ ಹೇಳಲೇ ?
ನಿನ್ನ ಜೊತೆ ಹೆಜ್ಜೆಯಿಡುವ ಮಾತು ನೀಡಿರುವೆ
ನನಗೆ ಗೊತ್ತು ನನ್ನ ಜೊತೆ ನೀ ನಡೆಯುವುದು ನಿನ್ನ ಎಂದಿನ ರೂಢಿ...!

ನಿನ್ನೊಂದಿಗೆ ಕಡಲ ದಡದಿ

ಎಂದೂ ಕಾಣದ ಹರುಷವ ನೀಡಿದೆ ನೀನಿಂದು
ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ...
ಸಂತಸದಿ ಬಾಳುವ ಚಿಗುರಾಸೆಯು
ಮೂಡಿದೆ ನಿನ್ನೊಂದಿಗೆ ಈ ಮನಕೆ ಇಂದು

ನನ್ನ ಪ್ರತಿ ಕಣ ಕಣದಲ್ಲೂ
ನಿನ್ನದೆ ಪ್ರತಿಫಲನದ ಸಂಭ್ರಮ
ಬರೆದಿರುವೆ ಪ್ರೇಮ ಗೀತೆ
ನನ್ನ ನೆತ್ತರವನುಕ್ಕಿಸಿ ನಿನಗೋಸ್ಕರ

ಮುಸ್ಸಂಜೆ ವೇಳೆ ಕಡಲ ತೀರದಿ
ಮೊದಲ ಹೆಜ್ಜೆಯು ನೀರು ಇಂಗಿದ ಮರಳಲಿ
ನಿನ್ನ ಹೆಜ್ಜೆಯ ಮೇಲೆ ನನ್ನ ಹೆಜ್ಜೆಯಿಡುತ
ಅನುಮತಿ ಸಮ್ಮತಿಗಳಿಲ್ಲದೆ ಕೂಡಿಕೊಂಡಿವೆ ಕಿರುಬೆರಳುಗಳು
ಮುಂದೆ ಸಾಗಿದಂತೆ ಬಿಗಿದಪ್ಪಿವೆ ಇಬ್ಬರ ಅಂಗೈಗಳು

ನಿನ್ನ ತುಂಟ ನಗುವ ನೋಡಿ
ಮೈ ಮರೆಯುವಾಸೆ ಇನ್ನೂ ಜೀವಂತ
ಜಗವೆಲ್ಲ ಸ್ಥಬ್ಧಗೊಂಡು
ಚರಾಚರಗಳ ಚಿತ್ತ ನಮ್ಮ ಮೇಲಿರಲು
ಹೊಟ್ಟೆ ಕಿಚ್ಚಿಗೆ ಸೂರ್ಯನ ಜಲಸಮಾಧಿ
ಮತ್ತೊಂದೆಡೆ ಹುಣ್ಣಿಮೆಯ ಚಂದಿರನ ಬಾಹ್ಯ ಬೆಂಬಲ

ತಾರೆಗಳ ಮಿಣುಕು ನೋಟವು
ಬೆಳದಿಂಗಳ ಕರಗಿ ಕಡಲ ಸೇರಲು
ಇಬ್ಬರ ಕಣ್ಣ ನೋಟ ಒಂದಾಗಲು
ನಿನ್ನ ಬೆನ್ನು ನಾಚಿ, ತಲೆಯೂರಲು
ನಿಂತಲ್ಲೆ ನನ್ನೆದೆಯ ಮೇಲೆ...
ಎದೆಯ ಬಡಿತದ ಶಬ್ದಕೆ ಬೆದರಿ
ನಿನ್ನ ಬೆಚ್ಚನೆಯ ಆಲಿಂಗನ
ಸುತ್ತಲಿನ ಪ್ರೇಕ್ಷಕರು ಬರೀ ಮೌನ!