Total Pageviews

Tuesday 20 September 2016

ಪ್ರೇಮ ರಸ

ನಿನ್ನ ನಗೆಗಡಲಿನಲ್ಲಿ ಮಿಂದು ಹೋದೆ ನಾನಿಂದು
ನಮ್ಮ ಪ್ರೀತಿಯ ಬಜಾರಿನಲ್ಲಿ...
ಎಲ್ಲೂ ಇಲ್ಲದ ಪ್ರೀತಿಯ ಕಂಡೆ
ನಿನ್ನ ತೀಕ್ಷ್ಣ ನೋಟದಲಿ ನಾನಿಂದು
ನಾ ಕಾಣೆಯಾದೆ ನಿನ್ನ ನಗೆಗಡಲಿನ ಸಂತೆಯಲ್ಲಿಂದು...

ಕಾಪಾಡುವೆ ನಿನ್ನ ನಗುವನು
ಬೇರೆ ಕಾವಲುಗಾರ ಬೇಕಿಲ್ಲ...!
ನನಗಾಗಿ...ನಮ್ಮ ಪ್ರೀತಿಗಾಗಿ...
ಇಷ್ಟಂತು ನಾ ಸ್ವಾರ್ಥಿಯಾಗದೆ ಬೇರೆ ದಿಕ್ಕಿಲ್ಲ...!
ನಾ ಖೈದಿಯಾದೆ ನಿನ್ನ ಪ್ರೇಮ ಪ್ರಪಂಚದಲ್ಲಿಂದು...


ನನ್ನ ಪ್ರೇಮಾಧ್ಯಯನದ ಹೊಸ ಅವತರಣಿಕೆ ನೀ
ನಿನ್ನ ಕೊರಳ ಮಾಲೆಯ ಗಟ್ಟಿ ಕೊಂಡಿ ನಾನು
ಪ್ರೀತಿಯ ಜೋಳಿಗೆ ಚಾಚಿರುವೆ
ನಿನ್ನ ಕೊರಳಿಗೆ ಜೋತು ಬೀಳಲೇ?
ನಿನ್ನ ಮುದ್ದಿಸಿ ಸೋತು ಬಿಡಲೇ?
  
ಕೆಂಪು ಗಲ್ಲದ ಮೇಲಿನ ಕಪ್ಪು ಚುಕ್ಕಿಯ ಪಲ್ಲಕ್ಕಿ
ಮುತ್ತಿಟ್ಟು ಚೂರು ಸಂತೈಸಲೇ?
ನಿನ್ನ ಕಿವಿಯ ಮೇಲೆ ನನ್ನ ಹೆಸರಿನ ಗುಂಜನ
ನಿನ್ನಲ್ಲೇ ಕಳೆದು ಹೋದರೆ ಹುಡುಕಿ ಕೊಡುವೆಯಾ ನನ್ನನು?
ಅಲ್ಲೇ, ಬಿಟ್ಟು ಬಿಡುವೆಯಾ ನನ್ನನು?

ನನ್ನ ಹೆಸರಿನ ಸಿಂಧುರವು
ನಿನ್ನ ಹಣೆಯ ಮೇಲೆ ಬಿಡಿಸಲು ನಾ
ಜೀವನವು ರಂಗದೋಕುಳಿ
ನಿನ್ನ ಒಂದು ಸ್ಪರ್ಷಕೆ ಕಾತುರದಿ ಕಾಯುತಿರಲು
ನೀ ಹರಿಸಿದೆ ಹಿಂದೆಂದೂ ಅರಿಯದ ಪ್ರೇಮ ಸುಧೆ
ನಾನು ಈಗ ಕೇವಲ ಮೂಕ ವಿಸ್ಮಿತ

ಹಗಲಿರುಳು ನಿನ್ನ ಮುಂಗುರಳ ನೆರಳಲಿ
ಮಲಗಿರಲು ನಾನು
ನೀ ಬರೀ ನನ್ನವಳೇ ಎಂಬ ಜಪ-ತಪದಿ
ನನಗೆ ಬೇರೆಯಾರೂ ಅನಿವಾರ್ಯವಾಗುವುದು ಬೇಡ
ನನ್ನ ಪ್ರೇಮ ಸಂಚಿಕೆಗೆ ನಿನ್ನ ರುಜುವಾತು ಸಾಕು
  
ನೀ ಹೀಗೆ ನಡೆದು ಬಂದ ಹೆಜ್ಜೆಯು
ನನ್ನೆದೆಯಲಿ ಯಾವತ್ತೂ ಜೀವಂತ
ಕಾಲಿಗೆ ಮುತ್ತಿಟ್ಟು ಕೃ‍‍‌‌ತಜ್ಞತೆ ಹೇಳಲೇ ?
ನಿನ್ನ ಜೊತೆ ಹೆಜ್ಜೆಯಿಡುವ ಮಾತು ನೀಡಿರುವೆ
ನನಗೆ ಗೊತ್ತು ನನ್ನ ಜೊತೆ ನೀ ನಡೆಯುವುದು ನಿನ್ನ ಎಂದಿನ ರೂಢಿ...!

ನಿನ್ನೊಂದಿಗೆ ಕಡಲ ದಡದಿ

ಎಂದೂ ಕಾಣದ ಹರುಷವ ನೀಡಿದೆ ನೀನಿಂದು
ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ...
ಸಂತಸದಿ ಬಾಳುವ ಚಿಗುರಾಸೆಯು
ಮೂಡಿದೆ ನಿನ್ನೊಂದಿಗೆ ಈ ಮನಕೆ ಇಂದು

ನನ್ನ ಪ್ರತಿ ಕಣ ಕಣದಲ್ಲೂ
ನಿನ್ನದೆ ಪ್ರತಿಫಲನದ ಸಂಭ್ರಮ
ಬರೆದಿರುವೆ ಪ್ರೇಮ ಗೀತೆ
ನನ್ನ ನೆತ್ತರವನುಕ್ಕಿಸಿ ನಿನಗೋಸ್ಕರ

ಮುಸ್ಸಂಜೆ ವೇಳೆ ಕಡಲ ತೀರದಿ
ಮೊದಲ ಹೆಜ್ಜೆಯು ನೀರು ಇಂಗಿದ ಮರಳಲಿ
ನಿನ್ನ ಹೆಜ್ಜೆಯ ಮೇಲೆ ನನ್ನ ಹೆಜ್ಜೆಯಿಡುತ
ಅನುಮತಿ ಸಮ್ಮತಿಗಳಿಲ್ಲದೆ ಕೂಡಿಕೊಂಡಿವೆ ಕಿರುಬೆರಳುಗಳು
ಮುಂದೆ ಸಾಗಿದಂತೆ ಬಿಗಿದಪ್ಪಿವೆ ಇಬ್ಬರ ಅಂಗೈಗಳು

ನಿನ್ನ ತುಂಟ ನಗುವ ನೋಡಿ
ಮೈ ಮರೆಯುವಾಸೆ ಇನ್ನೂ ಜೀವಂತ
ಜಗವೆಲ್ಲ ಸ್ಥಬ್ಧಗೊಂಡು
ಚರಾಚರಗಳ ಚಿತ್ತ ನಮ್ಮ ಮೇಲಿರಲು
ಹೊಟ್ಟೆ ಕಿಚ್ಚಿಗೆ ಸೂರ್ಯನ ಜಲಸಮಾಧಿ
ಮತ್ತೊಂದೆಡೆ ಹುಣ್ಣಿಮೆಯ ಚಂದಿರನ ಬಾಹ್ಯ ಬೆಂಬಲ

ತಾರೆಗಳ ಮಿಣುಕು ನೋಟವು
ಬೆಳದಿಂಗಳ ಕರಗಿ ಕಡಲ ಸೇರಲು
ಇಬ್ಬರ ಕಣ್ಣ ನೋಟ ಒಂದಾಗಲು
ನಿನ್ನ ಬೆನ್ನು ನಾಚಿ, ತಲೆಯೂರಲು
ನಿಂತಲ್ಲೆ ನನ್ನೆದೆಯ ಮೇಲೆ...
ಎದೆಯ ಬಡಿತದ ಶಬ್ದಕೆ ಬೆದರಿ
ನಿನ್ನ ಬೆಚ್ಚನೆಯ ಆಲಿಂಗನ
ಸುತ್ತಲಿನ ಪ್ರೇಕ್ಷಕರು ಬರೀ ಮೌನ!